ಬಂಟ್ವಾಳ, ಜೂನ್ 23, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಪೇಟೆಯ ಮೊಬೈಲ್ ಅಂಗಡಿಗಳಲ್ಲಿ ಸರಣಿ ಕಳವು ಕೃತ್ಯ ಹಾಗೂ ಕಳವು ಯತ್ನ ಪ್ರಕರಣಗಳು ಕಳೆದೆರಡು ದಿನಗಳಿಂದ ವರದಿಯಾಗಿದ್ದು, ಇಲ್ಲಿನ ನಗರ ಠಾಣೆಯ ಕೆಲವೇ ಹೆಜ್ಜೆಗಳ ದೂರದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರುತ್ತಿದ್ದು, ಬಿ ಸಿ ರೋಡಿನ ವ್ಯಾಪಾರಸ್ಥರು ಮತ್ತೊಮ್ಮೆ ಆತಂಕಕ್ಕೀಡಾಗುವಂತೆ ಮಾಡಿದ.
ಕಳೆದ ಕೆಲ ಸಮಯಗಳ ಹಿಂದೆ ಬಿ ಸಿ ರೋಡಿನ ಹೃದಯ ಭಾಗದ ಗಣೇಶ್ ಮೆಡಿಕಲ್ ಸಹಿತ ಆಸುಪಾಸಿನ ಕೆಲ ಅಂಗಡಿಗಳಲ್ಲಿ ಸರಣಿ ಕಳವು ಕೃತ್ಯ ನಡೆಸಿ ಕಳ್ಳರು ಪೊಲೀಸರಿಗೆ ಸವಾಲಾಗಿದ್ದರು. ಆ ಬಳಿಕ ಕೆಲ ದಿನಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಬಳಿಕ ಪೊಲೀಸ್ ಗಸ್ತು ತಣ್ಣಗಾಗಿದ್ದ ವೇಳೆ ಮತ್ತೆ ಬಿ ಸಿ ರೋಡಿನ ಹೂವಿನ ಅಂಗಡಿಗಳಲ್ಲಿ ಅದೇ ರೀತಿಯ ಸರಣಿ ಕಳವು ಕೃತ್ಯಗಳು ನಡೆದು ಇಲ್ಲಿನ ವ್ಯಾಪಾರಿಗಳು ತೀವ್ರ ಆತಂಕಿತರಾಗಿದ್ದರು.
ಕೆಲ ಸಮಯಗಳ ಬಳಿಕ ಇದೀಗ ಮತ್ತೆ ಕಳ್ಳರು ಪೊಲೀಸರಿಗೆ ಸವಾಲೆಸೆದಿದ್ದು, ಠಾಣೆಯ ಅನತಿ ದೂರದಲ್ಲೇ ಸತತ ದಿನಗಳಲ್ಲಿ ಮೊಬೈಲ್ ಅಂಗಡಿಗಳಿಗೆ ಲಗ್ಗೆ ಇಟ್ಟು ಕೈ ಚಳಕ ಪ್ರದರ್ಶಿಸಿದ್ದಾರೆ. ನಗರ ಪೊಲೀಸ್ ಠಾಣೆಯ ಬದಿಯಲ್ಲೇ ಇರುವ ಪುದು ಗ್ರಾಮದ ಮಾರಿಪಳ್ಳ-ಪಾಡಿ ನಿವಾಸಿ ಅರ್ಶದ್ ಮೊಹಮ್ಮದ್ ಅವರ ಮಾಲಕತ್ವದ ಎಕ್ಸ್ ಮೊಬೈಲ್ ಅಂಗಡಿಗೆ ಜೂನ್ 20 ರ ರಾತ್ರಿ ನುಗ್ಗಿದ್ದು, ಜೂ 21 ರಂದು ಬೆಳಿಗ್ಗೆ ಕಳವು ಕೃತ್ಯ ಬೆಳಕಿಗೆ ಬಂದಿದೆ. ಅಂಗಡಿಯ ಶಟರ್ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಕ್ಯಾಶ್ ಡ್ರಾವರಿನಲ್ಲಿಟ್ಟಿದ್ದ 22 ಸಾವಿರ ರೂಪಾಯಿ ನಗದು ಹಣ ಹಾಗೂ 5 ಹೊಸ ಮೊಬೈಲ್ ಸೆಟ್ ಗಳು, 5 ರಿಪೇರಿಗೆಂದು ಬಂದಿದ್ದ ಮೊಬೈಲ್ ಸೆಟ್ ಗಳು, 6 ನೆಕ್ ಬ್ಯಾಂಡ್ (ಬ್ಲೂ ಟೂತ್), 2 ಏರ್ ಬಡ್ಸ್ (ಬ್ಲೂ ಟೂತ್) ಮತ್ತು ಇತರ ಮೊಬೈಲ್ ಫೋನಿಗೆ ಸಂಬಂಧಪಟ್ಟ ಬಿಡಿ ಭಾಗಗಳು ಸೇರಿದಂತೆ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳವಾದ ಒಟ್ಟು ಮೌಲ್ಯ 52 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕಳವು ಕೃತ್ಯ ನಡೆದು ಒಂದೇ ದಿನ ಅಂತರದಲ್ಲಿ ಅಂದರೆ ಮರುದಿನ ಬಿ ಸಿ ರೋಡು ಖಾಸಗಿ ಬಸ್ಸು ನಿಲ್ದಾಣದ ಬದಿಯ ರವಿ ಅವರ ಮಾಲಕತ್ವದ ರಿಲ್ಯಾಕ್ಸ್ ಮೊಬೈಲ್ ಅಂಗಡಿಗೂ ನುಗ್ಗಿ ಕಳವು ಕೃತ್ಯಕ್ಕೆ ವಿಫಲ ಪ್ರಯತ್ನ ನಡೆಸಿದ್ದಾರೆ. ಈ ಎರಡೂ ಪ್ರಕರಣಗಳ ಬಗ್ಗೆ ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಳ್ಳರ ಜಾಡು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಬಿ ಸಿ ರೋಡು ನಗರ ಸೇರಿದಂತೆ ವಿವಿಧೆಡೆ ಸೀಸಿ ಕ್ಯಾಮೆರಾ ಕಣ್ಗಾವಲು ಇದ್ದು, ಈ ನಡುವೆಯೂ ಕಳ್ಳರು ಕೈಚಳಕ ಪ್ರದರ್ಶಿಸಿರುವುದು ಇದೀಗ ಇಲ್ಲಿನ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
0 comments:
Post a Comment