ಸುಳ್ಯ, ಜೂನ್ 06, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪ್ರದೇಶದಲ್ಲಿ ಭಾನುವಾರ ರಾತ್ರಿ ವ್ಯಕ್ತಿಯೋರ್ವರ ಮೇಲೆ ಅಪರಿಚಿತ ನಾಲ್ಕು ಮಂದಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ತಾಲೂಕಿನ ಸುಳ್ಯ ಕಸಬಾ ಗ್ರಾಮದ ಜಯನಗರ ನಿವಾಸಿ ದಿವಂಗತ ಇಸುಬು ಎಸ್ ಎ ಎಂಬವರ ಪುತ್ರ ಮುಹಮ್ಮದ್ ಸಾಯಿ (39) ಅವರು ಭಾನುವಾರ (ಜೂನ್ 5) ಅವರು ಬಂಟ್ವಾಳದಲ್ಲಿ ಹೆಂಡತಿಯ ತಂಗಿಯ ಮದುವೆ ಕಾರ್ಯ ಮುಗಿಸಿ ರಾತ್ರಿ 10.30ಕ್ಕೆ ಸುಳ್ಯದ ಜ್ಯೋತಿ ಸರ್ಕಲ್ ಹತ್ತಿರ ವೆಂಕಟರಮಣ ಸೊಸೈಟಿ ಬಳಿ ಮಾಣಿ-ಮೈಸೂರು ಹೆದ್ದಾರಿ ರಸ್ತೆಯ ಬದಿಯಲ್ಲಿ ತನ್ನ ಬಾಬ್ತು ಕೆಎ 21 ಪಿ 6869 ನಂಬ್ರದ ಕ್ರೇಟಾ ಕಾರನ್ನು ನಿಲ್ಲಿಸಿ ತನ್ನ ತಂಗಿ ರಜಿಯಾಳ ಹಳೆಯ ಮನೆಯ ಬಳಿಗೆ ಹೋಗಿ ವಾಪಸ್ಸು ತನ್ನ ಮನೆಗೆ ಹೋಗುವ ಸಲುವಾಗಿ ತನ್ನ ಕಾರಿನ ಬಳಿಗೆ ಬಂದು ಡೋರ್ ತೆರೆಯಲು ಸಿದ್ದತೆ ಮಾಡುತ್ತಿರುವಾಗ ಜ್ಯೋತಿ ಸರ್ಕಲ್ ಕಡೆಯಿಂದ ಬಂದ ಕೆಎ 12 ನೋಂದಣಿಯ ಸ್ಕಾರ್ಪಿಯೋ ಕಾರಿನಲ್ಲಿದ್ದ ಬಂದ ನಾಲ್ಕು ಜನ ಅಪರಿಚಿತರು ಕೊಲ್ಲುವ ಯಾವುದೋ ಉದ್ದೇಶದಿಂದ ಪಿಸ್ತೂಲ್ ಅಥವಾ ಕೋವಿಯಿಂದ ಸಾಯಿ ಅವರ ಕಡೆಗೆ ಗುಂಡು ಹಾರಿಸಿದ್ದಾರೆ.
ಆರೋಪಿಗಳು ಹಾರಿಸಿದ ಗುಂಡು ಸಾಯಿ ಅವರ ಬೆನ್ನಿನ ಎಡ ಬದಿಗೆ ತಾಗಿ ಅವರ ಕಾರಿನ ಬಲ ಬದಿಯ ಎರಡು ಡೋರ್‍ಗಳ ಮದ್ಯ ತಾಗಿದೆ. ಅದೃಷ್ಟವಶಾತ್ ಆರೋಪಿಗಳ ಗುರಿ ತಪ್ಪಿದ್ದರಿಂದ ಸಾಯಿ ಅವರು ಅಪಾಯದಿಂದ ಪಾರಾಗಿದ್ದು, ಹೊಟ್ಟೆಯ ಭಾಗಕ್ಕೆ ಅಲ್ಪಸ್ವಲ್ಪ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2022 ಕಲಂ 307, 34 ಐಪಿಸಿ ಮತ್ತು ಕಲಂ 25, 27 ಆರ್ಮ್ಸ್ ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.
0 comments:
Post a Comment