ಬಂಟ್ವಾಳ, ಜೂನ್ 07, 2022 (ಕರಾವಳಿ ಟೈಮ್ಸ್) : ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಪರಿಸರ ದಿನಾಚರಣೆಯ ಜೊತೆಗೆ ಹಸಿರು ಕರ್ನಾಟಕ ಕಾರ್ಯಕ್ರಮದ ಭಾಗವಾಗಿ ಬಿತ್ತೋತ್ಸವ- 2022 ಕಾರ್ಯಕ್ರಮವು ಬಂಟ್ವಾಳ ಅರಣ್ಯ ಇಲಾಖಾ ಸಹಯೋಗದೊಂದಿಗೆ ಆಚರಿಸಲಾಯಿತು.
ಬಿತ್ತೋತ್ಸವ ಕಾರ್ಯಕ್ರಮದ ಮಾಹಿತಿ, ಆಶಯ, ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದಬಂಟ್ವಾಳ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ರಾಜೇಶ್ ಬಳಿಗಾರ್ ಮಾತನಾಡಿ ಬೀಜಗಳನ್ನು ಪರಿಸರದಲ್ಲಿ ಬಿತ್ತುವ ಮೂಲಕ ಪರಿಸರ ಸಂರಕ್ಷಣೆ ಮಾಡಬಹುದು. ಮುಖ್ಯವಾಗಿ ವಿದ್ಯಾರ್ಥಿ ದೆಸೆಯಿಂದಲೇ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಭವಿಷ್ಯದಲ್ಲಿ ಪರಿಸರ ಮತ್ತು ಅರಣ್ಯ ಸಂರಕ್ಷಣೆ ಖಂಡಿತವಾಗಿಯೂ ಆಗುವುದು. ಗಿಡಗಳನ್ನು ನೆಡುವುದು ಮಾತ್ರವಲ್ಲದೇ ಅದರ ಪೋಷಣೆಯೂ ಅತೀ ಅವಶ್ಯಕವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಒಂದೊಂದು ಗಿಡ ನೆಟ್ಟಾಗ ಲಕ್ಷಾಂತರ ಮರಗಳ ಹುಟ್ಟಿಗೆ ಕಾರಣವಾಗುವುದು ಎಂದರು.
ಶಾಲಾ ಅಧ್ಯಾಪಕರಾದ ಬಾಲಕೃಷ್ಣ ಪರಿಸರಕ್ಕೆ ಮಾರಕವಾಗುವ ಪ್ಲ್ಯಾಸ್ಟಿಕ್‍ನಿಂದ ಇಟ್ಟಿಗೆ ತಯಾರಿಸುವ ವಿಧಾನವನ್ನು ತೋರಿಸಿಕೊಟ್ಟರು. ವಿದ್ಯಾರ್ಥಿನಿ ವೈದೇಹಿ ಪರಿಸರ ಗೀತೆ ಹಾಡಿದಳು. ಅರಣ್ಯ ಇಲಾಖೆಯಿಂದ ಸೀತಾಫಲ, ಹೆಬ್ಬಲಸು, ಹಲಸು, ಗಂಧ, ಕಾಡು ಬಾದಾಮಿ ಮುಂತಾದ 50ಕ್ಕೂ ಹೆಚ್ಚಿನ ಗಿಡಗಳ ಪ್ರದರ್ಶನ ಏರ್ಪಡಿಸಿ ಸುಮಾರು 500 ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇದರೊಂದಿಗೆ ಗಿಡಗಳನ್ನು ಬೆಳೆಸುವ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಬೀಜ ಸಂಗ್ರಹ ಸ್ಪರ್ಧೆಯನ್ನು ಏರ್ಪಡಿಸಿ, ನಂತರ 100 ಜಾತಿಯ ಕಾಡು ಹಣ್ಣಿನ ಬೀಜಗಳ ಸಹಿತ ಗಿಡಗಳ ಪ್ರದರ್ಶನ ಏರ್ಪಡಿಸಲಾಯಿತು.
ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ ಬಂಟ್ವಾಳ, ಶಾಲಾ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು, ಅರಣ್ಯ ರಕ್ಷಕರಾದ ಅನಿತಾ ಹಾಗೂ ದಯಾನಂದ ಉಪಸ್ಥಿತರಿದ್ದರು. ಅಧ್ಯಾಪಕರಾದ ಪ್ರೀತಾ ಸ್ವಾಗತಿಸಿ, ಗಾಯತ್ರಿ ವಂದಿಸಿದರು. ರಮ್ಯ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment