ಬೆಂಗಳೂರು, ಜೂ. 19, 2022 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ಪೂರಕ ಪರೀಕ್ಷೆ ನಡೆಸಲಾಗುವುದು. ಈ ವೇಳೆ ಮರು ಪರೀಕ್ಷೆ ಬರೆದು ಉತ್ತಿರ್ಣರಾಗಿ ಈ ವರ್ಷವೇ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಜೂನ್ ಕೊನೆಯ ವಾರದಲ್ಲಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ಪರೀಕ್ಷೆಗೆ ಸೋಮವಾರದಿಂದ ನೋಂದಣಿ ಆರಂಭವಾಗಲಿದ್ದು ಜೂನ್ 24ರ ವರೆಗೆ ದಂಡ ರಹಿತವಾಗಿ ನಿಗದಿತ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಬಳಿಕ ಜುಲೈ 4ರವರೆಗೆ ದಂಡ ಶುಲ್ಕದೊಂದಿಗೆ ನೋಂದಣಿಗೆ ಅವಕಾಶವಿರುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಕ್ಕೆ 140 ರೂಪಾಯಿಗಳು, ಎರಡು ವಿಷಯಕ್ಕೆ 270 ರೂಪಾಯಿಗಳು, ಮೂರು ಮತ್ತು ಹೆಚ್ಚಿನ ವಿಷಯಕ್ಕೆ 400 ರೂಪಾಯಿಗಳಂತೆ ಶುಲ್ಕ ನಿಗದಿಪಡಿಸಲಾಗಿದೆ.
ಫಲಿತಾಂಶ ತಿರಸ್ಕರಣಾ ಶುಲ್ಕ ಒಂದು ವಿಷಯಕ್ಕೆ 175 ರೂಪಾಯಿ, ಎರಡನೇ ಬಾರಿ ಅಥವಾ ಅಂತಿಮ ಬಾರಿ ತಿರಸ್ಕರಣೆಗೆ 350 ರೂಪಾಯಿ ನಿಗದಿ ಪಡಿಸಲಾಗಿದೆ.
ಪ್ರಸ್ತುತ ಪ್ರಕಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶದ ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರು ಮೌಲ್ಯಮಾಪನ ಮತ್ತು ಅಂಕ ಮರು ಎಣಿಕೆಗೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಸ್ಕ್ಯಾನ್ ಪ್ರತಿ ಪಡೆದವರಿಗೆ ಮಾತ್ರ ಮರು ಮೌಲ್ಯಮಾಪನ, ಅಂಕ ಮರು ಎಣಿಕೆಗೆ ಅವಕಾಶವಿರುತ್ತದೆ. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಸಲು ಜೂನ್ 18 ರಿಂದ ಜೂನ್ 30 ರವರೆಗೆ ಅವಕಾಶ ನೀಡಲಾಗಿದ್ದು, ಸ್ಕ್ಯಾನ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಜುಲೈ 6ರಿಂದ 10 ರವರೆಗೆ ಅವಕಾಶವಿರುತ್ತದೆ.
ಸ್ಕ್ಯಾನ್ ಪ್ರತಿ ಪಡೆದು ಪರಿಶೀಲಿಸಿದ ಬಳಿಕ ಅಗತ್ಯವೆನಿಸಿದವರು ಅಂಕ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಜುಲೈ 6 ರಿಂದ 13 ರವರೆಗೆ ಅರ್ಜಿ ಸಲ್ಲಿಸಬಹುದು. ಸ್ಕ್ಯಾನ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530/- ರೂಪಾಯಿಗಳು, ಪ್ರತಿ ವಿಷಯದ ಮರು ಮೌಲ್ಯಮಾಪನಕ್ಕೆ 1,670/- ರೂಪಾಯಿ ಶುಲ್ಕ ನಿಗದಿಪಡಿಸಿದೆ. ಅಂಕ ಮರು ಎಣಿಕೆಗೆ ಶುಲ್ಕ ಇರುವುದಿಲ್ಲ ಎಂದು ಪಿಯು ಇಲಾಖೆ ನಿರ್ದೇಶಕ ರಾಮಚಂದ್ರನ್ ತಿಳಿಸಿದ್ದಾರೆ.
ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ 6,810 ಮಂದಿ ವಿದ್ಯಾರ್ಥಿಗಳು ಕನಿಷ್ಠ 1 ರಿಂದ ಗರಿಷ್ಠ 5 ಗ್ರೇಸ್ ಅಂಕ ಪಡೆದು ಪಾಸಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. 2014 ರಿಂದ ಕೃಪಾಂಕ ನೀಡುವ ಪದ್ಧತಿ ಇಲಾಖೆಯಲ್ಲಿ ಜಾರಿಯಲ್ಲಿದೆ. ಅದರಂತೆ ಈ ಬಾರಿ 6,810 ಮಕ್ಕಳಿಗೆ ಅವರು ಅನುತ್ತಿರ್ಣವಾಗಿದ್ದ ಒಂದು ವಿಷಯದಲ್ಲಿ ಮಾತ್ರ ಕೃಪಾಂಕ ನೀಡಿ ಪಾಸು ಮಾಡಲಾಗಿದೆ. ಗರಿಷ್ಠ 6 ಕೃಪಾಂಕ ನೀಡಲು ಅವಕಾಶವಿತ್ತು. ಆದರೆ, ಅಷ್ಟು ಅಂಕಗಳನ್ನು ಯಾವ ವಿದ್ಯಾರ್ಥಿಯೂ ಪಡೆದಿಲ್ಲ. ಯಾವುದೇ ವಿದ್ಯಾರ್ಥಿ ಐದು ವಿಷಯದಲ್ಲಿ ಉತ್ತೀರ್ಣವಾಗಿ ಒಂದು ವಿಷಯದಲ್ಲಿ ಅನುತ್ತಿರ್ಣನಾಗಿದ್ದರೆ ಅಂತಹ ವಿದ್ಯಾರ್ಥಿಗೆ 5 ಅಂಕ ನೀಡಿದಲ್ಲಿ ಆ ಅನುತ್ತಿರ್ಣ ವಿಷಯವೂ ಪಾಸಾಗುವುದಿದ್ದರೆ ಮಾತ್ರ ಗ್ರೇಸ್ ಅಂಕ ನೀಡಲಾಗಿದೆ ಎಂದು ವಿವರಿಸಿದರು. 2020 ರಲ್ಲಿ 9,000 ಮಕ್ಕಳಿಗೆ ಗ್ರೇಸ್ ಅಂಕ ನೀಡಲಾಗಿತ್ತು. ಈ ಬಾರಿ ಈ ಸಂಖ್ಯೆ ಕಡಿಮೆಯಾಗಿದೆ.
0 comments:
Post a Comment