ಬಂಟ್ವಾಳ, ಜೂನ್ 14, 2022 (ಕರಾವಳಿ ಟೈಮ್ಸ್) : ತಾಲೂಕಿನ ಅರಳ ಗ್ರಾಮದ ಸಿದ್ದಕಟ್ಟೆ ಸಮೀಪದ ಸೊರ್ನಾಡು ಬಳಿ ಮಂಗಳವಾರ ಸಂಜೆ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರರಾದ ಲೊರೆಟ್ಟೋ ಸಮೀಪದ ಕಮಲ್‍ಕಟ್ಟೆ ನಿವಾಸಿಗಳಾದ ನಿತೇಶ್ (28) ಹಾಗೂ ಶಶಿಧರ್ (27)ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದ್ವಿಚಕ್ರ ವಾಹನ ಸವಾರರು ಸಿದ್ದಕಟ್ಟೆಯಿಂದ ಬಿ ಸಿ ರೋಡು ಕಡೆಗೆ ಬರುತ್ತಿದ್ದ ವೇಳೆ ಬಿ ಸಿ ರೋಡಿನಿಂದ ಕಾರ್ಕಳ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಇಬ್ಬರೂ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ. ಘಟನೆಯಿಂದ ಬೈಕ್ ಸಂಪೂರ್ಣ ಜಖಂಗೊಂಡಿದೆ.
ಅಪಘಾತ ನಡೆಸಿದ ಟಿಪ್ಪರ್ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ಪರಾರಿಯಾಗುತ್ತಿದ್ದ ಲಾರಿಯನ್ನು ಸ್ಥಳೀಯರು ಕುದ್ಕೋಳಿ ಬಳಿ ಅಡ್ಡಗಟ್ಟಿ ಹಿಡಿದಿದ್ದಾರೆ. ಟಿಪ್ಪರ್ ಚಾಲಕ ಶ್ರೇಯಸ್ ಎಂಬಾತನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎಂದು ಕೌಶಿಕ್ ಅವರು ಬಂಟ್ವಾಳ ಸಂಚಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2022 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment