ಬಂಟ್ವಾಳ, ಜೂನ್ 08, 2022 (ಕರಾವಳಿ ಟೈಮ್ಸ್) : 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಫಲಿತಾಂಶ ಪ್ರಕಟಗೊಂಡಿದ್ದ ವೇಳೆ 623 ಅಂಕಗಳನ್ನು ಗಳಿಸಿ ಶೇ 99.68 ಫಲಿತಾಂಶ ದಾಖಲಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದ ತಾಲೂಕಿನ ಬೋಳಂತೂರು ಗ್ರಾಮದ ಎನ್ ಸಿ ರೋಡು ನಿವಾಸಿ, ಕೊಣಾಜೆ ವಿಶ್ವಮಂಗಳ ಪ್ರೌಢಶಾಲಾ ವಿದ್ಯಾರ್ಥಿ ಶಾಝಿನ್ ಅಬ್ದುಲ್ ರಝಾಕ್ ಬೀರಾನ್ ಮೊೈದಿನ್ ಅವರು ಮರು ಎಣಿಕೆಯ ವೇಳೆ ಪೂರ್ಣ 625 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನ ಪಡೆದವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಜೂನ್ 19 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ವೇಳೆ ಶಾಝಿನ್ ಅವರು 623 ಅಂಕಗಳನ್ನು ಪಡೆದು ಶೇ 99.68 ಫಲಿತಾಂಶ ದಾಖಲಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದರು. ಭಾಷಾ ವಿಷಯ ಸಹಿತ 5 ವಿಷಯಗಳಲ್ಲಿ ಪೂರ್ಣ 100 ಅಂಕಗಳನ್ನು ಈತ ಪಡೆದಿದ್ದು, ವಿಜ್ಞಾನ ವಿಷಯದಲ್ಲಿ ಮಾತ್ರ 98 ಅಂಕಗಳನ್ನು ಪಡೆದಿದ್ದ. ಈ ಬಗ್ಗೆ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಿ ಅದನ್ನು ಪಡೆದು ಪರಿಶೀಲಿಸಿದಾಗ ವಿಜ್ಞಾನ ವಿಷಯದಲ್ಲೂ ಈತ ಯಾವುದೇ ತಪ್ಪು ಮಾಡದೆ ಇರುವುದನ್ನು ಗಮನಿಸಿದ ಪೋಷಕರು ಹಾಗೂ ಶಾಲಾ ಅಧ್ಯಾಪಕರು ಮರು ಎಣಿಕೆಗೆ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿ ಶಾಝಿನ್ ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದ. ಇದೀಗ ಮರು ಎಣಿಕೆಯ ಫಲಿತಾಂಶದಲ್ಲಿ ಈತ ವಿಜ್ಞಾನ ವಿಷಯದಲ್ಲೂ ಪೂರ್ಣ ಅಂಕಗಳನ್ನು ಪಡೆದು ಒಟ್ಟಾರೆ 625 ರಲ್ಲಿ 625 ಪೂರ್ಣ ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದವರ ಸಾಲಿನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ.
ಈತ ಬೋಳಂತೂರು-ಎನ್ ಸಿ ರೋಡು ನಿವಾಸಿ ಡಾ ಬೀರಾನ್ ಮೊೈದಿನ್ ಬಿ ಎಂ-ಶಾಹಿದಾ ಬೀರಾನ್ ಕಲ್ಲಾಜೆ ದಂಪತಿಯ ಪುತ್ರನಾಗಿದ್ದಾನೆ. ಈತ ಕಲಿಕೆಯಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಾದ ಜಿಲ್ಲಾ ಮಟ್ಟದ ಕ್ಷಿಝ್, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾನೆ.
0 comments:
Post a Comment