ಪುತ್ತೂರು, ಜೂನ್ 06, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಶನಿವಾರ (ಜೂ 4) ನಡೆದ ಕೊಲೆ ಆರೋಪಿ ಚರಣ್ ರಾಜ್ ರೈ ಎಂಬಾತನ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಲ್ಲಡ್ಕ ಕಿಶೋರ್ ಪೂಜಾರಿ ಸೇರಿದಂತೆ ರಾಕೇಶ್ ಮಡಿವಾಳ ಹಾಗೂ ರೇಮಂತ್ ಗೌಡ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ಆರಕ್ಕೇರಿದೆ.
ಮೂರು ಮಂದಿ ಆರೋಪಿಗಳಾದ ನರ್ಮೇಶ್ ರೈ, ನಿತಿಲ್ ಶೆಟ್ಟಿ, ವಿಜೇಶ್ ಎಂಬವರನ್ನು ಭಾನುವಾರವೇ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಕಿಶೋರ್ ಪೂಜಾರಿ, ರಾಕೇಶ್ ಮಡಿವಾಳ, ರೇಮಂತ್ ಗೌಡ ಅವರು ಹತ್ಯೆ ನಡೆಸಿದ ಬಳಿಕ ರೇಮಂತ್ ನ ಬೈಕಿನಲ್ಲಿ ಬೆಳ್ಳಾರೆಯ ನಿಂತಿಕಲ್ಲ್ ಎಂಬಲ್ಲಿಗೆ ಬಂದು ಅಲ್ಲಿ ಬೈಕ್ ಇಟ್ಟು ಆಟೋ ರಿಕ್ಷಾ ಬಾಡಿಗೆಗೆ ಗೊತ್ತುಪಡಿಸಿ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಅಲ್ಲಿಂದ ಬಾಡಿಗೆ ಕಾರಿನಲ್ಲಿ ಬಿಸಿಲೆ ಮಾರ್ಗವಾಗಿ ಸಕಲೇಶಪುರ ತಾಲೂಕಿನ ಹೆತ್ತೂರು ಎಂಬಲ್ಲಿಗೆ ತೆರಳಿದ್ದಾರೆ. ಅಲ್ಲಿ ಸುತ್ತಾಡಿಕೊಂಡು ಎರಡು ದಿವಸ ಕಳೆದ ನಂತರ ಸೋಮವಾರ (ಜೂನ್ 6) ಆರೋಪಿಗಳು ಕಾರನ್ನು ಬಾಡಿಗೆ ಪಡೆದು ಸೋಮವಾರ ಪೇಟೆ ಕಡೆಗೆ ಬರುತ್ತಿದ್ದ ವೇಳೆ ಮಾಹಿತಿ ಪಡೆದ ಸುಳ್ಯ ಠಾಣಾ ಪಿಎಸ್ ಐ ದಿಲೀಪ್ ಅವರ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಸೋಮವಾರ ಪೇಟೆಯಲ್ಲಿ ವಶಕ್ಕೆ ಪಡೆಯುವಲ್ಲಿ ಸಫಲವಾಗಿದೆ. ಜೂ
ಜೂನ್ 4 ರಂದು ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ನನ್ನು ಕಿಶೋರ್ ಪೂಜಾರಿ ಮತ್ತು ತಂಡ ತಲವಾರು ಮತ್ತು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೊಂದು ಪೂರ್ವ ದ್ವೇಷದಿಂದ ಮಾಡಿರುವ ಕೊಲೆಯಾಗಿದೆ.
ಮೃತ ಚರಣ್ ರಾಜ್ ಮೂರು ವರ್ಷಗಳ ಹಿಂದೆ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂಪ್ಯ ಬಳಿ ಕಾರ್ತಿಕ್ ಮೇರ್ಲ ಎಂಬಾತನ ಕೊಲೆ ಮಾಡಿದ್ದ. ಬಳಿಕ ಜೈಲುವಾಸ ಅನುಭವಿಸಿ ಜಾಮೀನಿನಲ್ಲಿ ಬಿಡುಗಡೆಗೊಂಡು ಪೆರ್ಲಂಪ್ಪಾಡಿಯಲ್ಲಿ ಹೊಸದಾಗಿ ತೆರೆಯಲಿರುವ ಮೆಡಿಕಲ್ ಶಾಪ್ ಕೆಲಸಕ್ಕೆ ಓಡಾಡಿಕೊಂಡಿದ್ದ ವೇಳೆ ಆರೋಪಿಗಳು ಸ್ಕೆಚ್ ಹಾಕಿ ಕೊಲೆ ಮಾಡುವಲ್ಲಿ ಸಫಲರಾಗಿದ್ದರು.
0 comments:
Post a Comment