ಪುತ್ತೂರು, ಜೂನ್ 05, 2022 (ಕರಾವಳಿ ಟೈಮ್ಸ್) : ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಮೂರು ವರ್ಷಗಳ ಹಿಂದಿನ ಕೊಲೆ ಆರೋಪಿ ಚರಣ್ ರಾಜ್ (28) ಎಂಬಾತನನ್ನು ಆರೋಪಿ ಕಲ್ಲಡ್ಕ ಕಿಶೋರ್ ಪೂಜಾರಿ ಸಹಿತ ಇತರ ಮೂರು ಮಂದಿಯ ತಂಡ ಶನಿವಾರ ಸಂಜೆ ಪುತ್ತೂರು ತಾಲೂಕು, ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.
ಈ ಬಗ್ಗೆ ಮೃತ ಚರಣ್ ರಾಜ್ ಅವರ ಸ್ನೇಹಿತ ಕೊಳ್ತಿಗೆ ಗ್ರಾಮದ ತಾರಿಗುಡ್ಡೆ ನಿವಾಸಿ ನವೀನ್ ಕುಮಾರ್ ಅವರು ಕೊಲೆ ನಡೆದ ಸ್ಥಳದಲ್ಲಿದ್ದು ಪ್ರತ್ಯಕ್ಷ ಸಾಕ್ಷಿಯಾಗಿ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೃತ ಚರಣರಾಜ್ ಅವರ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬುವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದು ಈ ಮೆಡಿಕಲ್ ಶಾಪ್ ನ ಪೂರ್ವತಯಾರಿ ಕೆಲಸ ನೋಡಿಕೊಳ್ಳಲು ಚರಣ್ ರಾಜ್ ಎಂದಿನಂತೆ ಶನಿವಾರ ಕೂಡಾ ಪೆರ್ಲಂಪಾಡಿಗೆ ಬಂದಿದ್ದು, ಸಂಜೆ ಸುಮಾರು 4.15 ರ ವೇಳೆಗೆ ಚರಣ್ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಹಂತಕರು ಚರಣ್ ರಾಜ್ ಗೆ ತಲವಾರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಲವಾರು ದಾಳಿಯಿಂದ ಗಂಭೀರ ಗಾಯಗೊಂಡ ಚರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಪೈಕಿ ಕಲ್ಲಡ್ಕದ ಕಿಶೋರ್ ಎಂಬಾತನನ್ನು ದೂರುದಾರ ನವೀನ್ ಕುಮಾರ್ ಗುರುತಿಸಿದ್ದು ಇತರ ಆರೋಪಿಗಳನ್ನು ಕೂಡಾ ಮುಂದಕ್ಕೆ ನೋಡಿದರೆ ಗುರುತಿಸುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಂತಕರು ಕೆಲಸ ಮುಗಿಸಿ ತಾವು ಬಂದಿದ್ದ ದ್ವಿಚಕ್ರ ವಾಹನದಲ್ಲಿ ಅಂಚಿನಡ್ಕ ಕಡೆಗೆ ಪರಾರಿಯಾಗಿರುತ್ತಾರೆ ಎನ್ನಲಾಗಿದೆ.
ಈ ಹಿಂದೆ ಆರ್ಯಾಪು ಗ್ರಾಮದ ಮೇರ್ಲ ವಾಸಿ ಕಾರ್ತಿಕ್ ಎಂಬಾತನನ್ನು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗ ಕೊಲೆ ನಡೆಸಿದ ಪ್ರಕರಣದಲ್ಲಿ ಚರಣ್ ರಾಜ ಆರೋಪಿಯಾಗಿದ್ದು ಇದೇ ದ್ವೇಷದಿಂದ ಕಾರ್ತಿಕನ ಸ್ನೇಹಿತ ಕಿಶೋರ್ ಹಾಗೂ ಇತರರು ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ನವೀನ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2022 ಕಲಂ 302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment