ಬಂಟ್ವಾಳ, ಜೂನ್ 18, 2022 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯಾಳಪಡು ಎಂಬಲ್ಲಿಗೆ ಪುದು ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ವಾಹನದಲ್ಲಿ ತ್ಯಾಜ್ಯ ತಂದು ಡಂಪ್ ಮಾಡಿದ ಬಗ್ಗೆ ಪತ್ತೆ ಹಚ್ಚಿದ ಅಮ್ಟಾಡಿ ಪಂಚಾಯತ್ ಪಿಡಿಒ ಅವರು ತ್ಯಾಜ್ಯ ಎಸೆದವನಿಂದಲೇ ವಿಲೇಗೊಳಿಸಿದ್ದಲ್ಲದೆ 5 ಸಾವಿರ ರೂಪಾಯಿ ದಂಡ ವಿಧಿಸಿದ ವಿಲಕ್ಷಣ ಘಟನೆ ಸಂಭವಿಸಿದೆ.
ಕಳೆದ ಗುರುವಾರ ರಾತ್ರಿ ಅಮ್ಟಾಡಿ ಪಂಚಾಯತ್ ವ್ಯಾಪ್ತಿಯ ಕುರಿಯಾಳ ಪಡು ರಸ್ತೆ ಬದಿಯಲ್ಲಿ ಅಪಾರ ಪ್ರಮಾಣದ ರಾಶಿ ತ್ಯಾಜ್ಯವನ್ನು ಅಪರಿಚಿತರು ವಾಹನದಲ್ಲಿ ತಂದು ಎಸೆದು ಹೋಗಿದ್ದರು. ಈ ಬಗ್ಗೆ ಗಮನಿಸಿದ ಸ್ಥಳೀಯರು ಅಮ್ಟಾಡಿ ಗ್ರಾ ಪಂ ಆಡಳಿತ ಹಾಗೂ ಅಧಿಕಾರಿಗಳಿಗೆ ಆರೋಪಿ ಪತ್ತೆ ಹಚ್ಚುವಂತೆ ದೂರಿಕೊಂಡಿದ್ದರು. ಸಾರ್ವಜನಿಕರ ದೂರಿಗೆ ಸಂಬಂಧಿಸಿದಂತೆ ಅಮ್ಟಾಡಿ ಗ್ರಾ ಪಂ ಪಿಡಿಒ ರವಿ ಹಾಗೂ ಬಿಲ್ ಸಂಗ್ರಾಹಕ ಚೇತನ್ ಅವರು ಜೊತೆಗೂಡಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಮಾಹಿತಿ ಸಂಗ್ರಹಕ್ಕಾಗಿ ರಾಶಿ ಹಾಕಿದ ತ್ಯಾಜ್ಯವನ್ನೇ ಇವರು ಹುಡುಕಾಡಿದ್ದಾರೆ. ಹುಡುಕಾಟ ನಡೆಸುವಾಗ ತ್ಯಾಜ್ಯ-ಕಸದ ರಾಶಿಯಲ್ಲಿ ಪುದು ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಕಾಗ ಪತ್ರಗಳೇ ಜಾಸ್ತಿಯಾಗಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಇದು ಪುದು ಗ್ರಾ ಪಂ ವ್ಯಾಪ್ತಿಯ ಕಸ ಎಂದು ಖಾತ್ರಿ ಮಾಡಿಕೊಂಡ ಪಿಡಿಒ ಅವರು ನೇರವಾಗಿ ಪುದು ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ಪ್ರಸ್ತಾಪ ಮಾಡಿ ಚರ್ಚಿಸಿದಾಗ ಅಲ್ಲಿನ ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದ ವ್ಯಕ್ತಿ ಕಸವನ್ನು ವಾಹನದ ಮೂಲಕ ಅಮ್ಟಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ವಿಲೇ ಮಾಡಿದ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ಗ್ರಾಮದ ಶುಚಿತ್ವಕ್ಕೆ ಸವಾಲಾದ ಗಂಭೀರ ತಪ್ಪೆಸಗಿದ ತ್ಯಾಜ್ಯ ವಿಲೇ ಗುತ್ತಿಗೆದಾರರ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿದ ಅಮ್ಟಾಡಿ ಪಂಚಾಯತ್ ಪಿಡಿಒ ಅವರು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಆತನಿಂದಲೇ ವಿಲೇವಾರಿ ಮಾಡಿಸಿದ್ದಲ್ಲದೆ ಗುತ್ತಿಗೆದಾರನಿಗೆ 5 ಸಾವಿರ ರೂಪಾಯಿಗಳ ಗಮನಾರ್ಹ ಮೊತ್ತದ ದಂಡವನ್ನು ವಿಧಿಸಿದ್ದಾರೆ.
ಗ್ರಾಮದ ಶುಚಿತ್ವದ ಬಗ್ಗೆ ಗಂಭೀರ ಕ್ರಮ ಕೈಗೊಂಡ ಅಮ್ಟಾಡಿ ಪಂಚಾಯತ್ ಪಿಡಿಒ ರವಿ ಹಾಗೂ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಅವರ ಕಾರ್ಯವೈಖರಿ ಇದೀಗ ಪಂಚಾಯತ್ ವ್ಯಾಪ್ತಿಯಲ್ಲಿ ಶ್ಪಾಘನೆಗೆ ಪಾತ್ರವಾಗಿದೆ.
ಅದೇ ರೀತಿ ಪುದು ಪಂಚಾಯತ್ ಹೆದ್ದಾರಿ ಬದಿ ಸಹಿತ ತನ್ನ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳದೆ ನರಕ ಸದೃಶ ಮಾಡುವುದಲ್ಲದೆ ತನ್ನ ಅದೇ ನರಕ ಸದೃಶ ಮನೋಸ್ಥಿತಿಯನ್ನು ಇತರ ಗ್ರಾಮದ ಮೇಲೂ ತೋರುವುದರ ವಿರುದ್ದ ಜನಾಕ್ರೋಶ ಸ್ಫೋಟಗೊಂಡಿದೆ. ಈ ಬಗ್ಗೆ ಪುದು ಪಂಚಾಯತ್ ಆಡಳಿತ ಹಾಗೂ ಅಧಿಕಾರಿ ವರ್ಗ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಸಾರ್ವಜನಿಕರು ಕೇಳುವಂತಾಗಿದೆ.
0 comments:
Post a Comment