ನೇತ್ರಾವತಿಯ ತಟದಲ್ಲೇ ಜನರಿಗೆ ಕುಡಿಯುವ ನೀರಿಗೆ ತಾತ್ವಾರ : ಸಜಿಪಮುನ್ನೂರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು - Karavali Times ನೇತ್ರಾವತಿಯ ತಟದಲ್ಲೇ ಜನರಿಗೆ ಕುಡಿಯುವ ನೀರಿಗೆ ತಾತ್ವಾರ : ಸಜಿಪಮುನ್ನೂರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು - Karavali Times

728x90

17 June 2022

ನೇತ್ರಾವತಿಯ ತಟದಲ್ಲೇ ಜನರಿಗೆ ಕುಡಿಯುವ ನೀರಿಗೆ ತಾತ್ವಾರ : ಸಜಿಪಮುನ್ನೂರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಬಂಟ್ವಾಳ, ಜೂನ್ 18, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ಕಚೇರಿಗೆ ಶುಕ್ರವಾರ ಗ್ರಾಮಸ್ಥರು ಘೇರಾವ್ ಹಾಕಿ ತಾಸುಗಳ ಕಾಲ ಅಧಿಕಾರಿಗಳನ್ನು ಕಚೇರಿಗೆ ಪ್ರವೇಶಿಸದಂತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. 

ನೇತ್ರಾವತಿ ನದಿ ತಟದಲ್ಲೇ ಇರುವ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಮಳೆಗಾಲದಲ್ಲೇ ಕುಡಿಯುವ ನೀರಿಗಾಗಿ ಉಂಟಾಗಿರುವ ತಾತ್ವಾರವೇ ಗ್ರಾಮಸ್ಥರ ಸಹನೆಯ ಕಟ್ಟೆ ಸ್ಫೋಟಗೊಳ್ಳಲು ಕಾರಣ. ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡಿಗೊಳಪಟ್ಟ ಶಾಂತಿನಗರ ನಿವಾಸಿಗಳು ಪುರುಷ-ಮಹಿಳೆಯರೆನ್ನದೆ ಶುಕ್ರವಾರ ಬೆಳಿಗ್ಗೆಯೇ ಪಂಚಾಯತ್ ಕಚೇರಿಗೆ ದೌಡಾಯಿಸಿ ಇಲ್ಲಿನ ಪಿಡಿಒ ಸಹಿತ ಅಧಿಕಾರಿ-ಸಿಬ್ಬಂದಿಗಳನ್ನು ಕಚೇರಿ ಕೋಣೆಗಳಿಗೆ ಪ್ರವೇಶಿಸದಂತೆ ತಡೆದು ತಾಸುಗಳ ಕಾಲ ವಾಕ್ಸಮರ ನಡೆಸಿದ ದೃಶ್ಯ ಕಂಡು ಬಂತು. ಮಳೆಗಾಲದಲ್ಲೇ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದೆ. ಕೆಲವೊಮ್ಮೆ ನೀರು ಸರಬರಾಜಾದರೂ ಅದು ನೇರವಾಗಿ ನದಿಯಿಂದ ಅಥವಾ ಟ್ಯಾಂಕಿಯಿಂದ ಯಾವುದೇ ಶುಚೀಕರಣ ಇಲ್ಲದೆ ಕಲ್ಮಶಯುಕ್ತ ನೀರು ಸರಬರಾಜಾಗುತ್ತಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ವೇಳೆ ಕಲ್ಮಶಯುಕ್ತ ನೀರನ್ನು ಪ್ರದರ್ಶಿಸಿದರು. 

ಪಂಚಾಯತ್ ಅಧ್ಯಕ್ಷರು ಕಳೆದ ನಾಲ್ಕೈದು ತಿಂಗಳಿನಿಂದ ಊರಿನಲ್ಲಿ ಇಲ್ಲದೆ ವಿದೇಶ ಪ್ರವಾಸದಲ್ಲಿದ್ದಾರೆ ಎನ್ನಲಾಗಿದ್ದು, ಉಪಾಧ್ಯಕ್ಷರ ಸಹಿತ ಆಡಳಿತ ಪಕ್ಷದ ಸದಸ್ಯರು ಏನೂ ಮಾಡಲಾಗದ ಪರಿಸ್ಥಿತಿ ಎದುರಿಸಿದರೆ, ವಾರ್ಡಿನ ವಿರೋಧ ಪಕ್ಷದ ಸದಸ್ಯರು ಗ್ರಾಮಸ್ಥರನ್ನು ಕರೆ ತಂದು ಇದೀಗ ಘೇರಾವ್ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿರೋಧ ಪಕ್ಷಗಳ ಪಾಲಿಗೆ ಶಾಸಕರು, ಸಚಿವರು, ಸರಕಾರ ಎಲ್ಲವನ್ನು ಹೊಂದಿದ್ದರೂ ಪಂಚಾಯತ್ ಅಧಿಕಾರ ಕೈಯಲ್ಲಿ ಇಲ್ಲದೆ ಇನ್ನೊಂದು ಪಕ್ಷದ ಕೈಯಲ್ಲಿರುವುದರಿಂದ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಕೂಡಾ ಜನರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಲು ವಿಫಲರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಕಾವ್ಯ, ಸತೀಶ್, ಲತಾ, ಸರಿತಾ, ವಿದ್ಯಾ, ನಳಿನಿ, ಭವಾನಿ, ಶಾಂತಾ, ಬೇಬಿ, ವಿದ್ಯಾ, ಅಭಿ, ವಿಠಲ, ಜಯರಾಮ, ಹೇಮಂತ, ಗೋಪಾಲ, ವಿದ್ಯಾ, ಜಯಂತ, ಜಯಂತಿ, ರತ್ನ, ವಸಂತಿ, ನವೀನ, ಲತಾ, ಕಮಲ, ಭಾರತಿ, ಲಕ್ಷ್ಮಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

ಕಳೆದ ತಿಂಗಳು ಸುರಿದ ಮುಂಗಾರು ಪೂರ್ವ ಮಳೆಗೆ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಮಳೆ ನೀರು ಪಂಚಾಯತ್ ಕಚೇರಿಗೆ ನುಗ್ಗಿದ್ದ ದೃಶ್ಯ ಕಂಡು ಬಂದಿತ್ತು. ಸ್ವತಃ ಪಂಚಾಯತ್ ಕಚೇರಿಯನ್ನೇ ಮಳೆ ನೀರಿನಿಂದ ರಕ್ಷಿಸಲು ಸಾಧ್ಯವಾಗದ ಆಡಳಿತದಿಂದ ಇನ್ನು ಗ್ರಾಮದ ಜನರ ಬವಣೆಯನ್ನು ಯಾವ ರೀತಿ ನಿಭಾಯಿಸಿಯಾರು. ಅದೂ ಕೂಡಾ ಮುಂಗಾರು ಪೂರ್ವ ಮಳೆಗೇ ಇಂತಹ ಪರಿಸ್ಥಿತಿಯಾದರೆ ಇನ್ನು ಪೂರ್ಣ ಮುಂಗಾರು ಪ್ರಾರಂಭವಾದರೆ ಇಲ್ಲಿನ ಪರಿಸ್ಥಿತಿ ಏನಾಗಬಹುದು ಎಂದು ಗ್ರಾಮಸ್ಥರು ಆ ಸಂದರ್ಭ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾಧ್ಯಮ ವರದಿಗೆ ಕೆಂಡಾಮಂಡಲರಾಗಿದ್ದ ಆಡಳಿತ ಪಕ್ಷದೊಂದಿಗೆ ನಂಟು ಹೊಂದಿದ್ದ ಚೇಲಾಗಳು ಹಿಂದಿನ ಆಡಳಿತದ ಕರ್ಮದ ಫಲ ಎಂದು ಸಾಮಾಜಿಕ ತಾಣಗಳಲ್ಲಿ ಜರೆದು ಗ್ರಾಮಸ್ಥರಿಂದ ಟ್ರೋಲ್ ಗೆ ಒಳಗಾಗಿದ್ದರು. ಹಿಂದಿನ ಆಡಳಿತದ ವೈಫಲ್ಯತೆಯನ್ನು ತೊಳೆದು ಹಾಕಲೆಂದೇ ಆ ಪಕ್ಷದ ಬೆಂಬಲಿತರನ್ನು ಕ್ಲೀನ್ ಸ್ವೀಪ್ ಮಾಡಿ ತಮ್ಮನ್ನು ಅಧಿಕಾರಕ್ಕೆ ತರಲಾಗಿದೆ. ಗ್ರಾಮವನ್ನು ಸ್ವರ್ಗ ಸಮಾನ ಮಾಡುತ್ತೇವೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದವರು ಇದೀಗ ಮತ್ತೆ ಅದೇ ಹಿಂದಿನ ಆಡಳಿತದತ್ತ ಬೆರಳು ತೋರುವುದಾದರೆ ಬದಲಾವಣೆ ಬರುವುದಾದರೂ ಹೇಗೆ ಎಂದು ಗ್ರಾಮಸ್ಥರು ಆಡಳಿತ ನಡೆಸುವವರ ಕಾಲೆಳೆದಿದ್ದಾರೆ. ಆದರೂ ಸಮಸ್ಯೆಗೆ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲೀ, ಅಧಿಕಾರಿ ವರ್ಗವಾಗಲೀ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ನೇತ್ರಾವತಿಯ ತಟದಲ್ಲೇ ಜನರಿಗೆ ಕುಡಿಯುವ ನೀರಿಗೆ ತಾತ್ವಾರ : ಸಜಿಪಮುನ್ನೂರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು Rating: 5 Reviewed By: karavali Times
Scroll to Top