ಬಂಟ್ವಾಳ, ಜೂನ್ 05, 2022 (ಕರಾವಳಿ ಟೈಮ್ಸ್) : ತಾಲೂಕಿನ ಕನ್ಯಾನ ಸಮೀಪದ ಕಣಿಯೂರು ಎಂಬಲ್ಲಿ ನಶೆಯಲ್ಲಿ ಜೆಸಿಬಿ ಚಲಾಯಿಸುತ್ತಿದ್ದ ಚಾಲಕನ ಅವಾಂತರಕ್ಕೆ ಸೈಕಲಿನಲ್ಲಿ ಡಿಪೋಗೆ ಹಾಲು ಕೊಂಡೊಯ್ಯುತ್ತಿದ್ದ ಬಾಲಕ ದಾರುಣವಾಗಿ ಬಲಿಯಾದ ಘಟನೆ ಭಾನುವಾರ ನಡೆದಿದೆ.
ಮೃತ ಬಾಲಕನನ್ನು ಕಣಿಯೂರು ನಿವಾಸಿ ಹಸೈನಾರ್ ಅವರ ಪುತ್ರ ಮುಹಮ್ಮದ್ ಅಖಿಲ್ (12) ಎಂದು ಹೆಸರಿಸಲಾಗಿದೆ. ಕನ್ಯಾನದ ಉದ್ಯಮಿಯೋರ್ವರ ಮನೆ ಕೆಲಸಕ್ಕೆಂದು ಗದಗ ಮೂಲದ ಚಾಲಕ ಸಾದಿಕ್ ಪಾಚಾ ಜೆಸಿಬಿ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಬಡ ಬಾಲಕ ಡಿಪೋಗೆ ಸೈಕಲ್ ಮೂಲಕ ಹಾಲು ಕೊಂಡೊಯ್ಯುತ್ತಿದ್ದ ವೇಳೆ ಜೆಸಿಬಿ ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂದರ್ಭ ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಚಾಲಕ ತೀರಾ ಅಮಾನವೀಯವಾಗಿ ವರ್ತಿಸಿ ತನ್ನ ಜೆಸಿಬಿ ಕೊಕ್ಕೆಯಿಂದ ಬಾಲಕನ ಮೃತದೇಹವನ್ನು ಸೈಕಲ್ ಸಮೇತ ಬದಿಗೆ ಸರಿಸಿ ಅಪಘಾತದ ವಿಷಯವನ್ನು ಮರೆ ಮಾಚಿ ಸ್ಥಳದಿಂದ ಪರಾರಿಯಾಗುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಚಾಲಕಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಆರೋಪಿ ಚಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment