ಗುರುಕಂಬಳ ಅಸ್ರಾರುದ್ದೀನ್ ದರ್ಗಾ ವಾರ್ಷಿಕ ಸಂದಲ್ ಕಾರ್ಯಕ್ರಮ
ಮಂಗಳೂರು, ಜೂನ್ 18, 2022 (ಕರಾವಳಿ ಟೈಮ್ಸ್) : ಕೈಕಂಬ-ಗುರುಕಂಬಳ ಸಯ್ಯಿದ್ ಅಸ್ರಾರುದ್ದೀನ್ ಅವುಲಿಯಾ ದರ್ಗಾ ಶರೀಫ್ ಇದರ ವಾರ್ಷಿಕ ಸಂದಲ್ ಕಾರ್ಯಕ್ರಮ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮೈಸೂರು ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು ಅಲ್ಲಾಹನ ಇಷ್ಟದಾಸರ ಉರೂಸಿನಂತಹ ಸ್ನೇಹಪೂರ್ವಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಅವರು ನಡೆದುಕೊಂಡು ಬಂದ ಧಾರ್ಮಿಕ ಚೌಕಟ್ಟು, ಅವರ ನಿಷ್ಕಳಂಕ ಜೀವನ ಇಂದಿನ ಯುವ ತಲೆಮಾರಿಗೆ ಮಾದರಿಯಾಗುವುದರ ಜೊತೆಗೆ ಅವರ ಗುಣ ಶ್ರೇಷ್ಠತೆಯನ್ನು ಕೊಂಡಾಡಿದ ಪುಣ್ಯವೂ ಲಭ್ಯವಾಗುವುದಲ್ಲಿ ಯಾವುದೇ ಸಂಶಯವಿಲ್ಲ. ಅದೇ ರೀತಿ ಸೂಫಿ-ಸಂತರು, ಅಲ್ಲಾಹನ ಇಷ್ಟ ದಾಸರ ಮಹಿಮೆಯನ್ನು ಸಮಾಜದ ಸಹೋದರ ಧರ್ಮೀಯರಿಗೂ ಮನವರಿಕೆ ಮಾಡಿಕೊಟ್ಟಂತಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಸರ್ವ ಮುಸ್ಲಿಮರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಪವಿತ್ರ ಇಸ್ಲಾಮಿನ ಅಂತಿಮ ಪ್ರವಾದಿಗಳು ಮುಸಲ್ಮಾನರ ಪಾಲಿಗೆ ಸರ್ವಶ್ರೇಷ್ಠವಾಗಿದ್ದು, ಈ ಲೋಕದ ಸೃಷ್ಟಿಗೇ ಕಾರಣಕರ್ತರು ಅವರಾಗಿದ್ದಾರೆ ಎಂದು ವಿಶ್ವಾಸ ಹೊಂದುವವರು ನಾವಾಗಿದ್ದೇವೆ. ಹೀಗಿರುತ್ತಾ ಯಾವುದೋ ಕಾರಣಕ್ಕೆ ಮುಸ್ಲಿಮರ ಹಾಗೂ ಪ್ರವಾದಿಗಳ ಮೇಲೆ ಮುಗಿಬೀಳುವಂತೆ ಮಾತನಾಡಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಸಮಾಜಘಾತುಕರ ಬಗ್ಗೆ ಸರಕಾರ ತಕ್ಷಣ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಇದೇ ವೇಳೆ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಆಗ್ರಹಿಸಿದರು.
ಈ ಸಂದರ್ಭ ಮೊಯಿನ್ ಅಲಿ ಶಾ ಚಿಶ್ತಿ, ಝುಬೈರ್ ಅಲಿ ಶಾ ಚಿಶ್ತಿ, ಮೌದೂದ್ ಅಲಿ ಶಾ ಚಿಶ್ತಿ, ಮುಹಮ್ಮದ್ ಅಲಿ ಶಾ ಚಿಶ್ತಿ, ಆರಿಫ್ ಮಸ್ತಾನ್ ಅಲಿ ಶಾ ಚಿಶ್ತಿ, ಮುಸ್ತಫಾ ಅಲಿ ಶಾ ಚಿಶ್ತಿ, ಅಬ್ದುಲ್ ಖಾದರ್ ಚಿಶ್ತಿ, ಅಬ್ದುಲ್ ಶುಕೂರ್ ಚಿಶ್ತಿ, ಅಕ್ರಂ ಚಿಶ್ತಿ, ಮುಖ್ತಾರ್ ಚಿಶ್ತಿ, ಕರೀಂ ಚಿಶ್ತಿ, ಉಮರ್ ಚಿಶ್ತಿ, ಮುಯಿದಿನ್ ಚಿಶ್ತಿ, ನವೀದ್ ಶಾ ಚಿಶ್ತಿ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಇತ್ತೀಚೆಗೆ ವಿವಾದವೇರ್ಪಟ್ಟ ಮಳಲಿ ಮಸೀದಿಗೂ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಾರ್ಥನೆ ಸಲ್ಲಿಸಿದರು.
0 comments:
Post a Comment