ಪುತ್ತೂರು, ಜೂನ್ 05, 2022 (ಕರಾವಳಿ ಟೈಮ್ಸ್) : ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಮೂರು ವರ್ಷಗಳ ಹಿಂದಿನ ಕೊಲೆ ಆರೋಪಿ ಚರಣ್ ರಾಜ್ (28) ಎಂಬಾತನನ್ನು ಆರೋಪಿ ಕಲ್ಲಡ್ಕ ಕಿಶೋರ್ ಪೂಜಾರಿ ಸಹಿತ ಇತರ ಮೂರು ಮಂದಿಯ ತಂಡ ಶನಿವಾರ ಸಂಜೆ ಪುತ್ತೂರು ತಾಲೂಕು, ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಇರಿದು ಕೊಲೆಗೈದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್ ತಂಡ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ನರ್ಮೇಶ್ ರೈ (29), ನಿತಿಲ್ ಶೆಟ್ಟಿ (23) ಹಾಗೂ ವಿಜೇಶ್ (22) ಎಂದು ಹೆಸರಿಸಲಾಗಿದೆ.
ಈ ಹಿಂದೆ ಆರ್ಯಾಪು ಗ್ರಾಮದ ಮೇರ್ಲ ನಿವಾಸಿ ಕಾರ್ತಿಕ್ ಎಂಬಾತನನ್ನು ಸಂಪ್ಯ ಪೆÇಲೀಸ್ ಠಾಣೆಯ ಮುಂಭಾಗ ಕೊಲೆ ನಡೆಸಿದ ಪ್ರಕರಣದಲ್ಲಿ ಚರಣ್ ರಾಜ ಆರೋಪಿಯಾಗಿದ್ದು, ಜೈಲಿನಿಂದ ಜಾಮೀನು ಬಿಡುಗಡೆಗೊಂಡು ತಿರುಗಾಡುತ್ತಿದ್ದ. ಇದೇ ದ್ವೇಷದಿಂದ ಕಾರ್ತಿಕನ ಸ್ನೇಹಿತ ಕಿಶೋರ್ ಹಾಗೂ ಇತರರು ಈ ಕೃತ್ಯ ಎಸಗಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಮೃತ ಚರಣರಾಜ್ ಅವರ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬುವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದು ಈ ಮೆಡಿಕಲ್ ಶಾಪ್ ನ ಪೂರ್ವತಯಾರಿ ಕೆಲಸಕ್ಕಾಗಿ ಚರಣ್ ರಾಜ್ ಓಡಾಡಿಕೊಂಡಿದ್ದ. ಈ ಬಗ್ಗೆ ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಹಂತಕರ ತಂಡ ಶನಿವಾರ ಸಂಜೆ ಕೊಲೆ ನಡೆಸುವಲ್ಲಿ ಸಫಲರಾಗಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಸೊನಾವನೆ ಋಷಿಕೇಶ್ ಸೊನಾವಣೆ, ಎಡಿಶನಲ್ ಎಸ್ಪಿ ಕುಮಾರ್ ಚಂದ್ರ ಹಾಗೂ ಪುತ್ತೂರು ಎಎಸ್ಪಿ ಗಾನಾ ಪಿ ಕುಮಾರ್ ಅವರ ಸೂಚನೆಯಂತೆ ಸುಳ್ಯ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ, ಬೆಳ್ಳಾರೆ ಹಾಗೂ ಪುತ್ತೂರು ಗ್ರಾಮಾಂತರ ಪಿಎಸ್ಸೈಗಳಾದ ರುಕ್ಮ ನಾಯ್ಕ ಹಾಗೂ ಉದಯ ರವಿ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡ ಮೂರು ಮಂದಿ ಆರೋಪಿಗಳನ್ನು ಭಾನುವಾರ (ಮೇ 5) ಪುತ್ತೂರು ತಾಲೂಕು, ಕೊಯ್ಯೂರು ಗ್ರಾಮದ ಪಳ್ಳತ್ತಡ್ಕ ಎಂಬಲ್ಲಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದರ ಆರೋಪಿಗಳ ಪತ್ತೆಗೆ ಶೋಧ ಕಾರ್ಯಕ್ಕೆ ಬಲೆ ಬೀಸಿದ್ದಾರೆ.
0 comments:
Post a Comment