ಬಂಟ್ವಾಳ, ಜೂನ್ 16, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಮನೆ ನಿವಾಸಿ ಪೂವಮ್ಮ (69) ಅವರು ತನ್ನ ಸೊಸೆ ಮೋಹಿನಿಯೊಂದಿಗೆ ಕಾರ್ಯಕ್ರಮಕ್ಕೆ ಹೋಗುವ ನಿಮಿತ್ತ, ಬುಧವಾರ ತನ್ನ ತಮ್ಮ ಶಿವಪ್ಪ ಅವರ ಮನೆಯ ಕಡೆಗೆ ಹಂಚಿಕಟ್ಟೆ ಕಡೆಯಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾವಳಪಡೂರು ಗ್ರಾಮದ ಹಂಚಿಕಟ್ಟೆ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಕುತ್ತಿಗೆಗೆ ಕೈ ಹಾಕಿ ಅವರು ಧರಿಸಿದ್ದ ಚಿನ್ನದ ಒಪ್ಪ (ಕೋಟಿಂಗ್) ಮಾಡಿದ ಅಂದಾಜು 1,200/- ರೂಪಾಯಿ ಮೌಲ್ಯದ ಬೆಳ್ಳಿಯ ಸರಗಳೆರಡನ್ನು ಎಳೆದು ದ್ವಿಚಕ್ರ ವಾಹನ ಸಮೇತವಾಗಿ ಪರಾರಿಯಾಗಿರುತ್ತಾನೆ.
ಕೃತ್ಯದಿಂದ ಮಹಿಳೆ ಪೂವಮ್ಮ ಅವರು ರಸ್ತೆಗೆ ಬಿದ್ದು, ಅವರ ಬಲ ಕೈ ಮೊಣಗಂಟಿಗೆ ತರಚಿದ ಗಾಯವಾಗಿರುವುದಲ್ಲದೇ, ಕುತ್ತಿಗೆಯ ಹಿಂಭಾಗಕ್ಕೂ ಗಾಯವಾಗಿರುತ್ತದೆ. ಕಪ್ಪು ಬಣ್ಣದ ನಂಬರ್ ನಮೂದಿಸದ ಸುಝುಕಿ ಬೈಕಿನಲ್ಲಿ ಆರೋಪಿ ಬಂದಿದ್ದು, ಬೂದು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ ಎಂದು ಪೂವಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 43/2022 ಕಲಂ 392 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment