ಬಂಟ್ವಾಳ, ಜೂನ್ 01, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಂಟ್ವಾಳ-ಬೈಪಾಸ್ ಸಮೀಪದ ಚೆಂಡ್ತಿಮಾರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಕಾರು ಚಾಲಕ, ಮಡಂತ್ಯಾರು ನಿವಾಸಿ, ಕ್ಯಾಟರಿಂಗ್ ಮಾಲಕ ರೋಶನ್ ಸೆರಾವೋ (45) ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಂಜೆ ವೇಳೆಗೆ ಸಾವನ್ನಪ್ಪಿದ್ದಾರೆ.
ಮಡಂತ್ಯಾರಿನಲ್ಲಿ ಕ್ಯಾಟರಿಂಗ್ ಉದ್ಯಮ ನಡೆಸುತ್ತಿರುವ ಸೆರಾವೋ ಅವರು ಬುಧವಾರ ಬೆಳಿಗ್ಗೆ ಮಂಗಳೂರಿಗೆ ತೆರಳಿ ಕೆಲಸ ಮುಗಿಸಿ ವಾಪಾಸು ಬರುತ್ತಿದ್ದ ವೇಳೆ ಬಂಟ್ವಾಳ ಬೈಪಾಸಿನಲ್ಲಿ ಎದರುರಿನಿಂದ ಬರುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಯಿಂದ ಗಂಭೀರ ಗಾಯಗೊಂಡ ರೋಶನ್ ಅವರನ್ನು ತಕ್ಷಣ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದಾರಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಸಂಜೆ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಟ್ಯಾಂಕರ್ ಮುಂಭಾಗ ಕೂಡಾ ಜಖಂಗೊಂಡಿದೆ.
ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳದಿಂದ ಕ್ರೇನ್ ಬಳಸಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment