ಬಂಟ್ವಾಳ, ಜೂನ್ 22, 2022 (ಕರಾವಳಿ ಟೈಮ್ಸ್) : ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರತಿ ಮಂಗಳವಾರ ನಡೆಯುವ ರೆವೆನ್ಯೂ ಸಂಬಂಧಿ ಮೇಲ್ಮನವಿ ಪ್ರಕರಣಗಳ ಪೈಕಿ ಶೇ 80 ರಷ್ಟು ಪ್ರಮಾಣದಲ್ಲಿ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದ್ದವುಗಳಾಗಿರುವುದರಿಂದ ಜಿಲ್ಲಾಧಿಕಾರಿಗಳು ವಾರದಲ್ಲಿ ಒಂದು ದಿನ ಇಂತಹ ಮೇಲ್ಮನವಿ ಪ್ರಕರಣಗಳ ವಿಚಾರಣೆಯನ್ನು ಬಂಟ್ವಾಳದಲ್ಲೇ ನಡೆಸುವಂತೆ ಬಂಟ್ವಾಳ ವಕೀಲರ ಸಂಘ ಮಂಗಳವಾರ ಬಿ ಸಿ ರೋಡಿನಲ್ಲಿ ನಡೆದ ಅಹವಾಲು ಮಂಡನಾ ಸಭೆ ನಡೆಸಿದ ವೇಳೆ ಡೀಸಿಗೆ ಲಿಖಿತ ಮನವಿ ಸಲ್ಲಿಸಿದೆ.
ಮಂಗಳೂರಿನಲ್ಲಿ ಡೀಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಪ್ರಕರಣಗಳ ವಿಚಾರಣೆ ನಡೆಸುವ ಸಂದರ್ಭ ಇತ್ತ ಬಂಟ್ವಾಳದ ಮೂರೂ ನ್ಯಾಯಾಲಯಗಳಲ್ಲಿ ಅತ್ಯಧಿಕ ಪ್ರಕರಣಗಳಿರುವುದರಿಂದ ಅವುಗಳನ್ನು ಬಿಟ್ಟು ಇಲ್ಲಿನ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಮಂಗಳೂರಿಗೆ ಆಗಮಿಸಲು ಕಷ್ಟಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ವಾರಕ್ಕೊಂದು ದಿನ ಬಂಟ್ವಾಳದಲ್ಲೇ ಪ್ರಕರಣಗಳ ವಿಚಾರಣೆ ನಡೆಸುವ ಮೂಲಕ ಬಂಟ್ವಾಳದಲ್ಲಿ ಕಾರ್ಯಾನಿರ್ವಹಿಸುತ್ತಿರುವ ಸುಮಾರು 200ಕ್ಕೂ ಅಧಿಕ ವಕೀಲರಿಗೆ ಹಾಗೂ ಅವರ ಕಕ್ಷಿದಾರರಿಗೆ ಅನುಕೂಲವಾಗುವಂತೆ ಸಹಕರಿಸುವಂತೆ ವಕೀಲರ ನಿಯೋಗ ಜಿಲ್ಲಾಧಿಕಾರಿಗೆ ಕೋರಿಕೊಂಡಿದೆ.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಹಲವು ಸಮಸ್ಯೆಗಳಿದ್ದು, ತಾಲೂಕು ರೆಕಾರ್ಡ್ ರೂಮಿನಲ್ಲಿ ದೃಢೀಕೃತ ಪ್ರತಿ ಸಿಗುವಲ್ಲಿ ವಿಳಂಬ, ಭೂನ್ಯಾಯ ಮಂಡಳಿ ಕಚೇರಿಯಲ್ಲಿ ದೃಢೀಕೃತ ಪ್ರತಿ ದೊರೆಯುವಲ್ಲಿ ವಿಳಂಬ, ಸರ್ವೆ ಇಲಾಖಾ ಕಚೇರಿಯಲ್ಲಿ ಹಲವು ಸಮಸ್ಯೆಗಳು, ಚುನಾವಣಾ ಶಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಇದ್ದು, ಈ ಎಲ್ಲಾ ಸಮಸ್ಯೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ವಕೀಲರಿಗೂ ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವಲ್ಲಿ ವಿಳಂಬವಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ವಕೀಲರ ಸಂಘ ಹಲವು ಬಾರಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಪೂರಕ ಸ್ಪಂದನೆ ದೊರೆತಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಕಲ್ಪಿಸುವಂತೆ ವಕೀಲರ ಸಂಘ ಡೀಸಿಯವರಿಗೆ ಕೋರಿಕೊಂಡಿದೆ. ಈ ಸಂದರ್ಭ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಉಪಸ್ಥಿತರಿದ್ದರು.
0 comments:
Post a Comment