ಬಂಟ್ವಾಳ, ಜೂನ್ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಹೋಬಳಿಯ ಬೋಳಂತೂರು ಗ್ರಾಮದ ಎನ್ ಸಿ ರೋಡ್ ಎಂಬಲ್ಲಿ ನಾರ್ಶದಿಂದ ಬೋಳಂತ್ತೂರು ಕಡೆಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿಟ್ಲ ಕಸಬಾ ಗ್ರಾಮದ ಪ್ರಭಾರ ಕಂದಾಯ ನಿರೀಕ್ಷಕರ ಜೊತೆ ಬಂಟ್ವಾಳ ತಾಲೂಕು ಪ್ರಭಾರ ಆಹಾರ ನಿರೀಕ್ಷಕ ಎ ಪ್ರಶಾಂತ್ ಶೆಟ್ಟಿ ಅವರು ಗುರುವಾರ ಬೆಳಿಗ್ಗೆ ಬೇಧಿಸಿದ್ದಾರೆ.
ಅನ್ನಭಾಗ್ಯ ಅಕ್ಕಿಯನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬೋಳಂತೂರು ಗ್ರಾಮದ ಕಲ್ಪನೆ ನಿವಾಸಿ ಅಬೂಬಕ್ಕರ್ ಬಿ, ಕೊಳ್ನಾಡು ಗ್ರಾಮದ ನಾರ್ಶ ನಿವಾಸಿ ಹಮೀದ್, ಹಾಗೂ ಅಕ್ಕಿ ಸಾಗಾಟ ನಡೆಸುತ್ತಿದ್ದ ಟಾಟಾ ಆಲ್ಟ್ರಾ ಟಿ-16 ವಾಹನದ ಚಾಲಕ ಚಂದ್ರೇಶ್ ಎಂದು ಹೆಸರಿಸಲಾಗಿದೆ.
ದಾಳಿ ವೇಳೆ ಅಧಿಕಾರಿಗಳು ವಾಹನದಲ್ಲಿದ್ದ ಸರಕಾರದಿಂದ ಸಾರ್ವಜನಿಕರಿಗೆ ವಿತರಿಸಲ್ಪಟ್ಟ ಉಚಿತ ಪಡಿತರ ಅಕ್ಕಿಗಳುಳ್ಳ 313 ಚೀಲಗಳು ಹಾಗೂ ವಿಟ್ಲ ಹೋಬಳಿಯ ಬೋಳಂತೂರು ಗ್ರಾಮದ ಹಮೀದ್ ನಾರ್ಶ ಅವರಿಗೆ ಸೇರಿದ ನ್ಯಾಯಬೆಲೆ ಅಂಗಡಿ ಸಂಖ್ಯೆ 68 ರ 235 ಚೀಲ ಅಕ್ಕಿಯನ್ನು ಹಾಗೂ ಅಂಗಡಿ ಸಂಖ್ಯೆ 105 ರ 78 ಚೀಲ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2022 ಕಲಂ 3,7 ಅವಶ್ಯ ವಸ್ತುಗಳ ಕಾಯ್ದೆ-1955 ಮತ್ತು ಕಲಂ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment