ಮಂಗಳೂರು, ಜೂನ್ 30, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 1 ರಂದು ಶುಕ್ರವಾರವೂ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಆರೆಂಜ್ ಎಲರ್ಟ್ ಘೋಷಿಸಿರುವ ಹಿನ್ನಲೆಯಲ್ಲಿ ಜುಲೈ 1 ರ ಶುಕ್ರವಾರವೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿಯಿಂದ ಪದವಿ ತರಗತಿವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಆದೇಶ ಹೊರಡಿಸಿದ್ದಾರೆ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮುಂಗಾರು ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ನಗರಗಳು ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಸರಿ ಇಲ್ಲದೆ ಜನ ನರಕಸದೃಶ ಸ್ಥಿತಿಯನ್ನು ಎದುರಿಸುವಂತಾಗಿದೆ.
ಬುಧವಾರ ರಾತ್ರಿ ನಿರಂತರ ಸುರಿದ ಮಳೆಗೆ ಗುರುವಾರ ಬೆಳಿಗ್ಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಆತಂಕದ ನಡುವೆ ತರಗತಿಗಳತ್ತ ಹೆಜ್ಜೆ ಹಾಕಿದ್ದರು. ಆದರೆ ತಡವಾಗಿ ಎಚ್ಚೆತ್ತುಕೊಂಡ ಡೀಸಿ ರಾಜೇಂದ್ರ ಅವರು ತರಗತಿ ಸೇರಿದ ವಿದ್ಯಾರ್ಥಿಗಳಿಗೆ ಪಾಠ ಮಾಡಿ, ತೆರಳದ ವಿದ್ಯಾರ್ಥಿಗಳಿಗೆ ರಜೆ ನೀಡಿ ಎಂಬ ಗೊಂದಲದ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಂದು ರೀತಿಯ ದ್ವಂದ್ವ ಸ್ಥಿತಿ ಎದುರಿಸಿದ್ದರು. ಮಧ್ಯಾಹ್ನದ ಬಳಿಕ ಮತ್ತೆ ಮಳೆ ಜೋರಾದ ಹಿನ್ನಲೆಯಲ್ಲಿ ಕೆಲ ಶೈಕ್ಷಣಿಕ ಸಂಸ್ಥೆಗಳು ಮಧ್ಯಾಹ್ನದ ನಂತರ ರಜೆ ಘೋಷಿಸಿದರೆ, ಇನ್ನು ಕೆಲ ಸಂಸ್ಥೆಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಜೆವರೆಗೂ ಮಕ್ಕಳನ್ನು ತರಗತಿಯಿಂದ ಕಳಿಸದೆ ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿರುವುದು ಕಂಡು ಬಂತು.
ಜಿಲ್ಲೆಯ ವಿವಿಧ ನಗರಗಳ ರಸ್ತೆಗಳೆಲ್ಲಾ ಕೃತಕ ನೆರೆಯಿಂದ ತೋಯ್ದು ಹೋದ ಪರಿಣಾಮ ಶಾಲಾ-ಕಾಲೇಜು ವಾಹನಗಳ ಚಾಲಕರೂ ಕೂಡಾ ಪರದಾಡುವಂತಾಗಿತ್ತು. ಈ ಎಲ್ಲಾ ಹಿನ್ನಲೆಯಿಂದ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯಿಂದಾಗಿ ಗುರುವಾರ ಸಂಜೆಯೇ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಡಾ ರಾಜೇಂದ್ರ ಅವರು ಶುಕ್ರವಾರ (ಜುಲೈ 1) ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
0 comments:
Post a Comment