ಬಂಟ್ವಾಳ, ಮೇ 23, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಇನ್ನೂ ಯಾವುದೇ ಸುರಕ್ಷತಾ ಕ್ರಮ ಇಲ್ಲದೆ ಬಾಯಿ ತೆರೆದ ಕೊಳವೆ ಇರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಪಂಜಿಕಲ್ಲು ಗ್ರಾಮದ ಮುಕುಡ ಎಂಬಲ್ಲಿ ಈ ಯಾವುದೇ ಮುಚ್ಚುಗಡೆ ಇಲ್ಲದೆ ಬಾಯಿ ತೆರೆದ ಸ್ಥಿತಿಯಲ್ಲಿರುವ ಕೊಳವೆ ಬಾವಿ ಇದ್ದು, ಸಣ್ಣ ಮಕ್ಕಳ ಪಾಲಿಗೆ ಮರಣ ಮೃದಂಗ ಭಾರಿಸುವಂತಿದೆ. ಕೆಲ ವರ್ಷಗಳ ಹಿಂದೆ ದೇಶಾದ್ಯಂತ ತೆರೆದ ಕೊಳವೆ ಬಾವಿಗಳ ದುರಂತದ ಬಳಿಕ ಎಚ್ಚೆತ್ತ ಸರಕಾರ ಸ್ಥಳೀಯ ಗ್ರಾಮ ಮಟ್ಟದಲ್ಲೂ ಇಂತಹ ತೆರೆದ ಕೊಳವೆ ಬಾವಿಗಳ ಬಗ್ಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ಪ್ರತಿ ಪಂಚಾಯ್ ಅಧಿಕಾರಿ ವರ್ಗಕ್ಕೂ ಕಟ್ಟಪ್ಪಣೆ ಹೊರಡಿಸಿತ್ತು. ಆ ಸಂದರ್ಭ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ವಿಶೇಷ ತಂಡ ಸರ್ವೇ ಕಾರ್ಯವನ್ನೂ ನಡೆಸಿ ತೆರೆದ ಬಾವಿಗಳ ಬಗ್ಗೆ ಕ್ರಮಕ್ಕೆ ಕೈಗೊಂಡಿತ್ತು.
ಆದರೂ ಪಂಜಿಕಲ್ಲು ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿರುವ ಈ ತೆರೆದ ಕೊಳವೆ ಬಾವಿಗೆ ಇನ್ನೂ ಯಾವುದೇ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕಾರ್ಯಪ್ರವೃತ್ತರಾಗಿಲ್ಲ. ಇಲ್ಲಿನ ಅಪಾಯಕಾರಿ ತೆರೆದ ಕೊಳವೆ ಬಾವಿಗೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸ್ಥಳೀಯ ನಿವಾಸಿ ಮೆಲ್ವಿನ್ ದಿನೇಶ ಲೋಬೋ ಎಂಬವರು ಪಂಚಾಯತ್ ಅಧಿಕಾರಿಗಳಿಗೆ ಲಿಖಿತ ದೂರು ನೀಡಿ ವಾರಗಳು ಕಳೆದರೂ ಇನ್ನೂ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ. ಈ ತೆರೆದ ಕೊಳವೆ ಬಾವಿ ಇರುವ ಪ್ರದೇಶದಲ್ಲಿ ಹಣ್ಣುಗಳ ಮರಗಳೂ ಇರುವುದರಿಂದ ಹಣ್ಣು ಕೀಳಲು ಮಕ್ಕಳಾಟಿಕೆಯಲ್ಲಿ ತೆರಳುವ ಸಣ್ಣ ಮಕ್ಕಳು ಅಪಾಯ ಎದುರಿಸುವ ಸಾಧ್ಯತೆಯೂ ನಿಚ್ಚಳವಾಗಿದೆ ಎಂದು ಲಿಖಿತ ದೂರಿನಲ್ಲಿ ಪಂಚಾಯತ್ ಅಧಿಕಾರಿಗಳ ಗಮನ ಸೆಳೆಯಲಾಗಿದೆ.
ಪಂಜಿಕಲ್ಲು ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ಬಾಯಿ ತೆರೆದುಕೊಂಡಿರುವ ಅಪಾಯಕಾರಿ ಕೊಳವೆ ಬಾವಿಯ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಗಮನ ಹರಿಸಿ ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment