ಫಲಿತಾಂಶ ಉತ್ತಮಪಡಿಸಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಶೇ 10 ಗ್ರೇಸ್ ಅಂಕ ನೀಡಲು ನಿರ್ಧಾರ? - Karavali Times ಫಲಿತಾಂಶ ಉತ್ತಮಪಡಿಸಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಶೇ 10 ಗ್ರೇಸ್ ಅಂಕ ನೀಡಲು ನಿರ್ಧಾರ? - Karavali Times

728x90

12 May 2022

ಫಲಿತಾಂಶ ಉತ್ತಮಪಡಿಸಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಶೇ 10 ಗ್ರೇಸ್ ಅಂಕ ನೀಡಲು ನಿರ್ಧಾರ?

ಬೆಂಗಳೂರು, ಮೇ 12, 2022 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಹಿನ್ನಲೆಯಲ್ಲಿ ಕೇವಲ ಅಂಕಗಳ ಕೊರತೆಯಿಂದ ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳ ಉತ್ತೀರ್ಣತೆಗಾಗಿ 10 ಶೇಕಡಾ ಗ್ರೇಸ್ ಅಂಕಗಳನ್ನು ನೀಡಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದ್ದು, ಇದಕ್ಕೆ ಸರಕಾರ ಕೂಡಾ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಇಂತದ್ದೊಂದು ಸಂತೋಷದ ಸುದ್ದಿ ಶಿಕ್ಷಣ ಇಲಾಖೆ ನೀಡುತ್ತಿದೆ. ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ. 10ರಷ್ಟು ಗ್ರೇಸ್ ಅಂಕ ನೀಡಿ ಪಾಸ್ ಮಾಡಲು ತೀರ್ಮಾನಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.

ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಕೃಪಾಂಕಗಳನ್ನು ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ. ಉದಾಹರಣೆಗೆ ಪರೀಕ್ಷೆ ಬರೆದಿರುವ ಆರು ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದು, ಇನ್ನುಳಿದ ಮೂರು ವಿಷಯಗಳಲ್ಲಿ ಅನುತ್ತಿರ್ಣವಾಗಿದ್ದರೆ ಆ ಮೂರು ವಿಷಯಗಳಲ್ಲಿ ಥಿಯರಿ ಪರೀಕ್ಷೆಯ ತಲಾ 80 ಅಂಕದ ಶೇ. 10ರಷ್ಟು ಅಂದರೆ ಮೂರು ವಿಷಯಗಳಿಂದ 24 ಅಂಕಗಳು ಗ್ರೇಸ್ ಅಂಕಗಳಾಗಿ ದೊರೆಯುತ್ತವೆ. ಕನ್ನಡ ಭಾಷಾ ವಿಷಯಕ್ಕೆ 100 ಅಂಕಗಳಿಗೆ ಥಿಯರಿ ಪರೀಕ್ಷೆ ಇರುವುದರಿಂದ ಶೇ. 10 ಅಂದರೆ 10 ಅಂಕಗಳಾಗುತ್ತದೆ. ಹಾಗಾಗಿ ಅನುತ್ತೀರ್ಣ ವಿಷಯಗಳಲ್ಲಿ ಪ್ರಥಮ ಭಾಷೆ ಕನ್ನಡ ಇದ್ದಲ್ಲಿ ಮೂರು ವಿಷಯಗಳ ಕೃಪಾಂಕ ಸಂಖ್ಯೆ ಆಗ 26 ಆಗಲಿದೆ. ಈ ಅಂಕಗಳನ್ನು ಅನುತ್ತೀರ್ಣ ವಿಷಯಗಳಿಗೆ ಹಂಚಿಕೆ ಮಾಡಿ ಪಾಸು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಗ್ರೇಸ್ ಅಂಕಗಳನ್ನು ಯಾವ ರೀತಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

2021ರ ಪೂರಕ ಪರೀಕ್ಷೆಗಳಲ್ಲಿ ಗ್ರೇಸ್ ಅಂಕದಿಂದಾಗಿ ಶೇ. 9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದರು. ಸುಮಾರು 13 ವಿದ್ಯಾರ್ಥಿಗಳಿಗೆ ಗರಿಷ್ಠ 26 ಅಂಕಗಳನ್ನು ನೀಡಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಆರಂಭದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಹೀಗಾಗಿ ಮಕ್ಕಳಲ್ಲಿ ಕಲಿಕೆಯ ಕೊರತೆ ಸಹಜ ಎಂದು ಗ್ರೇಸ್ ಅಂಕ ನೀಡಲಾಗುತ್ತಿದೆ. ಬಹುಶಃ ಈ ಬಾರಿಯೂ ಗ್ರೇಸ್ ಅಂಕ ಪಡೆದು ಪಾಸಾಗುವ ಮಕ್ಕಳ ಸಂಖ್ಯೆ ಹೆಚ್ಚೇ ಇರುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. 

ಅಧಿಕಾರಿಗಳು ಹೇಳುವ ಪ್ರಕಾರ ಗ್ರೇಸ್ ಅಂಕ ನೀಡಿಕೆ ಹೊಸದೇನಲ್ಲ, ನಿಯಮಾವಳಿಯಲ್ಲೇ ಇದಕ್ಕೆ ಮೊದಲಿಂದಲೂ ಅವಕಾಶವಿದೆ. ಫಲಿತಾಂಶ ಉತ್ತಮಗೊಳಿಸುವ ಕಾರಣದಿಂದ ಗರಿಷ್ಠ ಮೂರು ವಿಷಯಗಳಿಗೆ ಶೇ. 5ರಷ್ಟು ಗ್ರೇಸ್ ಅಂಕ ನೀಡುವ ಮಾನದಂಡ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ, ಕೋವಿಡ್ ಕಾರಣದಿಂದ ಶಾಲೆಗಳು ಆರಂಭವಾಗದೆ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯದೆ ಕಲಿಕೆಯಲ್ಲಿ ಹಿಂದುಳಿದ ಕಾರಣ 2021ರಲ್ಲಿ ಮಂಡಳಿಯು ಇದನ್ನು ಶೇ. 10ಕ್ಕೆ ಹೆಚ್ಚಿಸಿತ್ತು. 2021ರ ವಾರ್ಷಿಕ ಪರೀಕ್ಷೆಯನ್ನು ಎರಡೇ ದಿನದಲ್ಲಿ ಮುಗಿಸಿ ಸಾಮೂಹಿಕವಾಗಿ ಎಲ್ಲರನ್ನೂ ಪಾಸ್ ಮಾಡಿದ್ದರಿಂದ ಆಗ ಗ್ರೇಸ್ ಅಂಕದ ಪ್ರಶ್ನೆ ಉದ್ಭವಿಸಿರಲಿಲ್ಲ. ಆದರೆ, ನಂತರ ನಡೆದ ಪೂರಕ ಪರೀಕ್ಷೆಯಲ್ಲಿ ಶೇ. 10 ಗ್ರೇಸ್ ಅಂಕಗಳನ್ನು ನೀಡಲಾಗಿತ್ತು.

ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಗ್ರೇಸ್ ಅಂಕ ನೀಡುವ ವಿಚಾರ ನಿಯಮಾವಳಿಯಲ್ಲೇ ಇದೆ. ಅದು ಈ ವರ್ಷವೂ ಮುಂದುವರೆಯುತ್ತದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತ ವಿಶಾಲ್ ಅವರು.

  • Blogger Comments
  • Facebook Comments

0 comments:

Post a Comment

Item Reviewed: ಫಲಿತಾಂಶ ಉತ್ತಮಪಡಿಸಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಶೇ 10 ಗ್ರೇಸ್ ಅಂಕ ನೀಡಲು ನಿರ್ಧಾರ? Rating: 5 Reviewed By: karavali Times
Scroll to Top