ಬಂಟ್ವಾಳ, ಮೇ 25, 2022 (ಕರಾವಳಿ ಟೈಮ್ಸ್) : ರಾಜಕೀಯ ಕಾರಣಗಳಿಗೆ ಮಾತ್ರ ಧಾರ್ಮಿಕ ವಿಚಾರಗಳನ್ನು ಎಳೆದು ತರುವ ಮಂದಿಗೆ ಜಲಸನ್ನಿಧಿ ಹಾಗೂ ನಾಗಸಾನಿಧ್ಯ ಇರುವಲ್ಲಿ ಸ್ಫೋಟಕ ಬಳಸಬಾರದು ಎಂಬ ಕನಿಷ್ಠ ಜ್ಞಾನವೂ ಇಲ್ಲದಾಯಿತೇ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಮಾರ್ಮಿಕವಾಗಿ ಪ್ರಶ್ನಿಸಿದರು.
ಅನಂತಾಡಿ ಗೋಳಿಕಟ್ಟೆಯಲ್ಲಿ ತುಂಬೆಕೋಡಿ ಗಣಿಗಾರಿಕೆಯ ವಿರುದ್ಧ ಮಾಣಿ ಮತ್ತು ಅನಂತಾಡಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ “ಗಣಿಗಾರಿಕೆ ನಿಲ್ಲಿಸಿ, ಸುಳ್ಳಮಲೆ ಗುಹಾತೀರ್ಥ ಉಳಿಸಿ” ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಧರ್ಮದ ಬಗ್ಗೆ ಮಾತನಾಡುವವರು ಸುಳ್ಳಮಲೆಯಲ್ಲಿ ನಾಸ್ತಿಕರಂತೆ ವರ್ತಿಸುತ್ತಿದ್ದಾರೆ. ರಾಜಕೀಯಕ್ಕಾಗಿ, ವೋಟ್ ಬ್ಯಾಂಕಿಗಾಗಿ ಮಾತ್ರ ಧರ್ಮದ ವಿಚಾರ ಮಾತನಾಡುತ್ತಾರೆ ಎಂಬುದಕ್ಕೆ ಸುಳ್ಳಮಲೆ ಜ್ವಲಂತ ನಿದರ್ಶನವಾಗಿದೆ. ಜಲ ಸನ್ನಿಧಿ ಹಾಗೂ ನಾಗಸಾನಿಧ್ಯ ಇರುವಲ್ಲಿ ಯಾವುದೇ ಸ್ಪೋಟಕಗಳನ್ನು ಬಳಸಬಾರದು. ಸಾನಿಧ್ಯ ಉಳಿಸುವ ನಿಟ್ಟಿನಲ್ಲಿ ಯಾವ ಅಷ್ಟಮಂಗಲದ ಅವಶ್ಯಕತೆಯೂ ಇಲ್ಲ ಎಂದರು.
ಒಂದು ಎಕ್ರೆ ಗಣಿಗಾರಿಕೆಗೆ ಅನುಮತಿ ಪಡೆದುಕೊಂಡು ಮೂರು ಎಕ್ರೆಯಲ್ಲಿ ಕೋರೆ ನಡೆಸಲಾಗುತ್ತಿದೆ. ಗಣಿಗಾರಿಕೆಯ ಪ್ರದೇಶದಿಂದ ಗುಹಾ ತೀರ್ಥದಿಂದ 50 ಮೀರಟರ್ ದೂರ ಹಾಗೂ 300 ಮೀಟರ್ ದೂರದಲ್ಲಿ ಉಳ್ಳಾಲ್ತಿ ಕ್ಷೇತ್ರವಿದೆ. ಆದರೂ ಅನಂತಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಜನರ ಮನಸ್ಸಿನಲ್ಲಿರುವ ಬೇನೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ರಮಾನಾಥ ರೈ ಹೇಳಿದರು.
ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ರಾಜ್ಯ ಮಾಲಿನ್ಯ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಜಿ ಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಬಂಟ್ವಾಳ ತಾ ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ತಾ ಪಂ ಮಾಜಿ ಸದಸ್ಯ ಕುಶಲ ಎಂ ಪೆರಾಜೆ, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಕೆಪಿಸಿಸಿ ಸಂಯೋಜಕ ಚಿತ್ತರಂಜನ್, ಕೆಪಿಸಿಸಿ ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ತಾ ಪಂ ಮಾಜಿ ಉಪಾಧ್ಯಕ್ಷೆ ಕಾಂಚಲಾಕ್ಷಿ, ಬಂಟ್ವಾಳ ಪುರಸಭಾ ಸದಸ್ಯ ಜನಾರ್ಧನ ಚೆಂಡ್ತಿಮಾರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment