ಬಂಟ್ವಾಳ, ಮೇ 06, 2022 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಸಂಜೀವ ಎಂಬವರು ತನ್ನ ಅಪ್ರಾಪ್ತ ವಯಸ್ಸಿನ ಮಗಳು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಾಲೆತ್ತೂರು ಸಮೀಪದ ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಅಲಿಯಾಸ್ ಕುಟ್ಟ ಎಂಬಾತನ ದುಷ್ಪ್ರೇರಣೆಯೇ ಕಾರಣ ಎಂದು ಆರೋಪಿಸಿ ವಿಟ್ಲ ಠಾಣೆಗೆ ನೀಡಿದ್ದ ದೂರಿನಂತೆ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಆರೋಪಿ ಶಾಹುಲ್ ಹಮೀದ್ ಎಂಬಾತನನ್ನು ಬೆಳ್ತಂಗಡಿ ತಾಲೂಕು ಮಡಂತ್ಯಾರು ಗ್ರಾಮದ ಅಳೆಕ್ಕಿ ಎಂಬಲ್ಲಿಂದ ಗುರುವಾರ ರಾತ್ರಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ವಿಟ್ಲ ಸಮೀಪದ ಕನ್ಯಾನ ಗ್ರಾಮದ ಕಾಣಿಯೂರು ಮಸೀದಿ ಹಿಂಭಾಗದ ದಿವಂಗತ ಸುಲೈಮಾನ್ ಫೈಝಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕಾರ್ಮಿಕ ಸಂಜೀವ ಅವರ 14 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿ ಬುಧವಾರ (ಮೇ 4) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆಗೆ ಸಂಬಂಧಿಸಿದಂತೆ ಆಕೆಯನ್ನು ಪ್ರೀತಿಸುವಂತೆ ಬಲವಂತಪಡಿಸಿ ಕೃತ್ಯಕ್ಕೆ ದುಷ್ಪ್ರೇರಣೆ ನೀಡಿದ್ದಾನೆ ಎಂಬ ಆರೋಪದಲ್ಲಿ ಕಣಿಯೂರು ತಲೆಕ್ಕಿ ನಿವಾಸಿ ಶಾಹುಲ್ ಹಮೀದ್ (30) ಎಂಬಾತನ ವಿರುದ್ದ ಬಾಲಕಿಯ ಹೆತ್ತವರ ದೂರಿನಂತೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2022 ಕಲಂ 305 ಐಪಿಸಿ ಮತ್ತು ಕಲಂ 3(2)(v), 3(2)(va) The SC & ST (Prevention of Atrocities) Amendment Act 2015 ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ ಅವರ ನೇತೃತ್ವದಲ್ಲಿ ಆರೋಪಿಯ ಪತ್ತೆಗೆ ಎರಡು ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದರು.
ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ ಸೋನಾವಣೆ ಮತ್ತು ಅಡಿಷನಲ್ ಎಸ್ಪಿ ಕುಮಾರ ಚಂದ್ರ ಅವರ ಮಾರ್ಗದರ್ಶನ, ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ ಅವರ ನೇತೃತ್ವ, ವಿಟ್ಲ ಠಾಣಾ ಎಸ್ಸೈಗಳಾದ ನಾಗರಾಜ್ ಎಚ್ ಹಾಗೂ ಸಂದೀಪ ಕುಮಾರ್ ಶೆಟ್ಟಿ, ಎಎಸೈ ಮಂಜುನಾಥ ಟಿ, ಸಿಬ್ಬಂದಿಗಳಾದ ಡ್ಯಾನಿ ಪ್ರಾನ್ಸಿಸ್ ತಾವ್ರೂ, ಪ್ರಸನ್ನ, ಸೀತಾರಾಮ ಹೇಮರಾಜ, ಅಶೋಕ್, ಶ್ರೀಧರ, ಕುಮಾರ, ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಕುಮಾರ್, ದಿವಾಕರ ಅವರು ಆರೋಪಿ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment