ಬಂಟ್ವಾಳ, ಮೇ 19, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಿದ್ದಕಟ್ಟೆಯಲ್ಲಿ ಬೃಹತ್ ಆಲದ ಮರವೊಂದು ಗುರುವಾರ ಮಧ್ಯಾಹ್ನದ ವೇಳೆಗೆ ಹಠಾತ್ ಆಗಿ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದ ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಯಿತು.
ಸಿದ್ದಕಟ್ಟೆ ಪೇಟೆಯ ಸಮೀಪ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಹಠಾತ್ ಆಗಿ ಘಟನೆ ಸಂಭವಿಸಿರುವುದರಿಂದ ಈ ಮಾರ್ಗವಾಗಿ ಸಂಚರಿಸ ಹೊರಟ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಯಿತು. ಬಳಿಕ ಬದಲಿ ಮಾರ್ಗ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತಾದರೂ ಬಹುತೇಕ ವಾಹನ ಸವಾರರಿಗೆ ಈ ಬದಲಿ ಮಾರ್ಗದ ಪರಿಚಯ ಇಲ್ಲದ ಪರಿಣಾಮ ಸುತ್ತಾಟ ನಡೆಸುವಂತಹ ಪರಿಸ್ಥಿತಿ ಉಂಟಾಗಿತ್ತು. ಮದುವೆ ಇನ್ನಿತರ ಅಗತ್ಯ ಕಾರ್ಯಗಳಿಗಾಗಿ ಹೊರಟು ಬಂದವರು ಈ ಹಠಾತ್ ಘಟನೆಯಿಂದ ತೊಂದರೆ ಅನುಭವಿಸಿದರು.
ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಅಕಾಲಿಕ ವ್ಯಾಪಕ ಮಳೆ ಆರಂಭವಾಗಿದ್ದು, ತಾಲೂಕಿನ ವಿವಿಧೆಡೆ ರಸ್ತೆಗೆ ಮರಗಳು ಉರುಳಿ ಬೀಳುತ್ತಿರುವ ಘಟನೆಗಳು ಹಲವು ಕಡೆ ನಡೆದಿದೆ. ಮಳೆಗಾಲ ಪೂರ್ವದಲ್ಲಿ ಅರಣ್ಯ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಸರ್ವೆ ನಡೆಸಿ ರಸ್ತೆಯಂಚಿನಲ್ಲಿರುವ ಬೃಹತ್ ಮರಗಳ ಹಾಗೂ ಹಳೆಯ ಹಾಗೂ ಅವಧಿ ಮೀರಿದ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸುವ ಕೆಲಸ ಮಾಡದೆ ಇರುವುದೇ ಇದೀಗ ಇಂತಹ ಅನಾಹುತಗಳು ಸಂಭವಿಸಲು ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
0 comments:
Post a Comment