ಮಂಗಳೂರು, ಮೇ 19, 2022 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಬುಧವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಅವರು ಗುರುವಾರ ಬೆಳಿಗ್ಗೆ ಆದೇಶ ಹೊರಡಿಸಿದ್ದು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಪಾಲಿಗೆ ಗೊಂದಲಕ್ಕೆ ಕಾರಣವಾಯಿತು.
ಜಿಲ್ಲಾಧಿಕಾರಿಗಳ ಆದೇಶ ಬಹಳಷ್ಟು ವಿಳಂಬವಾಗಿ ಘೋಷಣೆಯಾಗಿದ್ದು, ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಲಭಿಸುವಾಗ ಬೆಳಿಗ್ಗೆ 8.30 ಗಂಟೆ ಮೀರಿತ್ತು. ಅಷ್ಟೊತ್ತಿಗಾಗಲೇ ವಿದ್ಯಾರ್ಥಿಗಳು-ಶಿಕ್ಷಕರು ಮನೆಯಿಂದ ಹೊರಟು ಕೆಲವರು ಶಾಲೆ ತಲುಪಿದರೆ, ಇನ್ನು ಕೆಲವರು ಶಾಲಾ ದಾರಿ ಮಧ್ಯೆ ಇದ್ದರು. ಈ ಸಂದರ್ಭ ಬಂದ ಹಠಾತ್ ಆದೇಶದಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಸಹಿತ ಎಲ್ಲಾ ವರ್ಗಗಳೂ ಸಂಪೂರ್ಣ ಗೊಂದಲಕ್ಕೀಡಾಗಿದ್ದು, ಅತ್ತ ಮನೆಯಲ್ಲೂ ಇಲ್ಲದೆ ಇತ್ತ ಶಾಲೆಯಲ್ಲೂ ಇರದ ಅಡಕತ್ತರಿಯ ಪರಿಸ್ಥಿತಿ ಒದಗಿ ಬಂದಿತ್ತು. ಕೊನೆಗೂ ಜಿಲ್ಲಾಧಿಕಾರಿಗಳ ಆದೇಶ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಮುಖ್ಯೋಪಾಧ್ಯಾಯರನ್ನು ತಲುಪಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ವಿದ್ಯಾರ್ಥಿಗಳು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿ ಮನೆ ಸೇರುವಂತಾಯಿತು.
ಶಾಲಾ ಮಕ್ಕಳನ್ನು ಶಾಲೆಗೆ ಬಿಟ್ಟು ಹೋದ ವಾಹನ ಚಾಲಕರು ಹಾಗೂ ಪೋಷಕರು ರಜೆ ಘೋಷಣೆಯ ಸುದ್ದಿ ತಿಳಿದು ವಿದ್ಯಾರ್ಥಿಗಳನ್ನು ವಾಪಾಸು ಕರೆ ತರಲು ಮತ್ತೆ ಶಾಲೆಯತ್ತ ದೌಡಾಯಿಸಬೇಕಾಗಿ ಬಂದಿದ್ದು, ಪೋಷಕರು ಇದ್ದ ಕೆಲಸ-ಕಾರ್ಯಗಳನ್ನು ಬದಿಗಿಟ್ಟು ಮಕ್ಕಳ ಹಿತದೃಷ್ಟಿಯಿಂದ ಬಿರುಸಿನಿಂದ ಸುರಿಯುತ್ತಿರುವ ಮಳೆಯ ಮಧ್ಯೆ ಮತ್ತೆ ಶಾಲೆಗೆ ಬಂದು ಮಕ್ಕಳನ್ನು ಮನೆಯತ್ತ ಕರೆ ತರುತ್ತಿರುವ ದೃಶ್ಯಗಳು ಪೇಟೆಗಳಲ್ಲಿ ಕಂಡು ಬಂತು. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಕೆಲ ಶಿಕ್ಷಕರು ಮಾತ್ರ ಶಾಲೆಗಳಲ್ಲಿ ಉಳಿದುಕೊಂಡಿದ್ದರು.
ವ್ಯಾಪಕವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ಉಳಿದೆಡೆ ಹೆದ್ದಾರಿ ಚತುಷ್ಪಥ ಸಹಿತ ಇತರ ಕಾಮಗಾರಿಯಿಂದಾಗಿ ರಸ್ತೆ, ಚರಂಡಿ ಅವ್ಯವಸ್ಥೆಗಳು ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಶಾಲಾ ಘೋಷಣೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮವೇ ಆದರೂ ಜಿಲ್ಲಾಧಿಕಾರಿಗಳ ಘೋಷಣಾ ಆದೇಶ ಹೊರಬಿದ್ದಿದ್ದು ಮಾತ್ರ ಬಹಳಷ್ಟು ತಡವಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಕೆಲ ದಿನಗಳಿಂದ ಹವಾಮಾನ ಇಲಾಖೆ ನಿಖರವಾದ ಮುನ್ನೆಚ್ಚರಿಕಾ ಮಾಹಿತಿಗಳನ್ನು ರವಾನಿಸುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ವಿವಿಧ ಅಲರ್ಟ್ ಘೋಷಿಸುತ್ತಿದ್ದರೂ ಕನಿಷ್ಠ ಮುನ್ನಾ ರಾತ್ರಿಯಾದರೂ ಆದೇಶ ಹೊರಡಿಸಬೇಕಾದ ಜಿಲ್ಲಾಡಳಿತ ಬಹಳಷ್ಟು ತಡವಾಗಿ ಆದೇಶ ಹೊರಡಿಸಿದ್ದರಿಂದಾಗಿ ಪೋಷಕರು ಗೊಂದಲ ಹಾಗೂ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿ ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳ ಕರೆ ತರುವ ವಾಹನ ಚಾಲಕರು ಹೇಳಿಕೊಳ್ಳುತ್ತಿರುವುದು ಕೇಳಿ ಬಂತು.
0 comments:
Post a Comment