ಬೆಂಗಳೂರು, ಮೇ 19, 2022 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಈ ಬಾರಿ ಅಂದರೆ 2021-22ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ದಾಖಲೆಯ ಪ್ರಮಾಣದಲ್ಲಿ ಪ್ರಕಟವಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿಯೇ ಇದು ಅತ್ಯಧಿಕ ಶೇಕಡಾವಾರು ಫಲಿತಾಂಶ ಎಂದು ಹೇಳಲಾಗಿದೆ. ಶೇಕಡಾ 90.29 ಬಾಲಕಿಯರು, ಶೇಕಡಾ 81.03 ಬಾಲಕರು ತೇರ್ಗಡೆಗೊಂಡಿದ್ದು, ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ.
ಈ ಬಾರಿ ಗ್ರೇಡ್ ಅಂಕಗಳನ್ನು ನೀಡಲಾಗಿದ್ದು, 1,18,875 ಮಂದಿ ವಿದ್ಯಾರ್ಥಿಗಳು ಎ+ ಗ್ರೇಡ್ ಪಡೆದುಕೊಂಡಿದ್ದರೆ, 1,82,060 ಮಂದಿ ವಿದ್ಯಾರ್ಥಿಗಳು ಎ ಗ್ರೇಡ್, 1,73,528 ಮಂದಿ ಬಿ+ ಗ್ರೇಡ್, 1,43,900 ಮಂದಿ ಬಿ ಗ್ರೇಡ್, 87,801 ಮಂದಿ ಸಿ+ ಗ್ರೇಡ್, 14,627 ಮಂದಿ ವಿದ್ಯಾರ್ಥಿಗಳು ಸಿ ಗ್ರೇಡ್ ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ.
91 ರಿಂದ 100 ಅಂಕ ಪಡೆದವರಿಗೆ ಎ+, 81ರಿಂದ 90 ಅಂಕ ಗಳಿಸಿದವರಿಗೆ ಎ ಗ್ರೇಡ್, 71ರಿಂದ 80 ಅಂಕ ಗಳಿಸಿದ್ದರೆ ಬಿ+, 61 ರಿಂದ 60 ಅಂಕ ಗಳಿಸಿದವರಿಗೆ ಬಿ ಗ್ರೇಡ್, 51 ರಿಂದ 60 ಅಂಕ ಗಳಿಸಿದವರಿಗೆ ಸಿ+ ಹಾಗೂ 35 ರಿಂದ 50 ಅಂಕ ಗಳಿಸಿದವರಿಗೆ ಸಿ ಗ್ರೇಡ್ ನೀಡಲಾಗುತ್ತದೆ.
ರಾಜ್ಯದ 1462 ಸರಕಾರಿ ಶಾಲೆಗಳಲ್ಲಿ ಎಲ್ಲ ಮಕ್ಕಳೂ ತೇರ್ಗಡೆಯಾಗಿದ್ದಾರೆ. 467 ಅನುದಾನಿತ ಶಾಲೆಗಳು, 1991 ಅನುದಾನ ರಹಿತ ಶಾಲೆಗಳಲ್ಲಿ ನೂರು ಶೇಕಡಾ ಫಲಿತಾಂಶ, ಎರಡು ಸರಕಾರಿ ಶಾಲೆಗಳು, ಮೂರು ಅನುದಾನಿತ ಮತ್ತು 15 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625ಕ್ಕೆ 625 ಪೂರ್ಣ ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 309 ವಿದ್ಯಾರ್ಥಿಗಳಿಗೆ 624, 472 ಮಂದಿಗೆ 623 ಅಂಕ ದೊರೆತಿದ್ದು ಬಳಿಕದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ರಾಜ್ಯದ 3,920 ಶಾಲೆಗಳಿಗೆ ಶೇಕಡಾ 100ರಷ್ಟು ಫಲಿತಾಂಶ ಬಂದಿದೆ. ಸರಕಾರಿ ಶಾಲೆಗೆ ಶೇಕಡಾ 88, ಅನುದಾನಿತ ಶಾಲೆಯಲ್ಲಿ ಶೇಕಡಾ 87.84, ಅನುದಾನ ರಹಿತ ಶಾಲೆಗಳಲ್ಲಿ ಶೇಕಡಾ 92.29 ರಷ್ಟು ಫಲಿತಾಂಶ ಬಂದಿದೆ.
0 comments:
Post a Comment