ಶೇನ್ ವಾರ್ನ್, ರಾಡ್ ಮಾರ್ಷ್ ನಿಧನದ ಆಘಾತ ಮಾಸುವ ಮುನ್ನವೇ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಮತ್ತೊಂದು ದುರಂತ ಆಘಾತ
ಸಿಡ್ನಿ, ಮೇ 15, 2022 (ಕರಾವಳಿ ಟೈಮ್ಸ್) : ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ (46) ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ನಗರದ ಹೊರವಲಯದ ಹಾರ್ವೇ ರೇಂಜ್ ರಸ್ತೆಯಲ್ಲಿ ರಾತ್ರಿ ಸುಮಾರು 11 ಗಂಟೆ ವೇಳೆಗೆ ಸೈಮಂಡ್ಸ್ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಸೈಮಂಡ್ಸ್ ಒಬ್ಬರೇ ಇದ್ದರು. ಅಲೈಸ್ ರಿವರ್ ಬ್ರಿಡ್ಜ್ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ. ತುರ್ತು ಸೇವಾ ತಂಡವು ಸೈಮಂಡ್ಸ್ ಅವರ ಜೀವ ಉಳಿಸಲು ಪ್ರಯತ್ನ ನಡೆಸಿದ್ದು, ಸಫಲವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
46 ವರ್ಷದ ಕ್ರಿಕೆಟಿಗ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 1998 ರಿಂದ 2009 ನಡುವೆ ಒಟ್ಟು 198 ಏಕದಿನ, 26 ಟೆಸ್ಟ್ ಹಾಗೂ 14 ಟಿ-20 ಪಂದ್ಯಗಳಲ್ಲಿ ಸೈಮಂಡ್ಸ್ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2003 ಮತ್ತು 2007ರ ವಿಶ್ವಕಪ್ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕಳೆದ ಮಾರ್ಚ್ ತಿಂಗಳಲ್ಲಿ ಆಸೀಸ್ ಕ್ರಿಕೆಟ್ ದಿಗ್ಗಜರಾದ ಶೇನ್ ವಾರ್ನ್, ರಾಡ್ ಮಾರ್ಷ್ ನಿಧನರಾಗಿರುವ ಆಘಾತ ಮಾಸುವ ಮುನ್ನವೇ ಆಸ್ಟ್ರೇಲಿಯಾದ ಮತ್ತೊಬ್ಬ ಹಿರಿಯ ಹಾಗೂ ಅನುಭವಿ ಆಟಗಾರ ದುರಂತ ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮತ್ತೊಬ್ಬ ಶ್ರೇಷ್ಠ ಆಟಗಾರರನ್ನು ಕಳೆದುಕೊಂಡಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಚೇರ್‌ಮನ್ ಲಾಚನ್ ಹೆಂಡರ್‌ಸನ್ ಪತ್ರಿಕಾ ಪ್ರಕಟಣೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಆಂಡ್ರ್ಯೂ ಸೈಮಂಡ್ಸ್ ಶತಮಾನದ ಪ್ರತಿಭಾನ್ವಿತ ಆಲ್ರೌಂಡರ್‌ಗಳಲ್ಲಿ ಒಬ್ಬರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ವಿಶ್ವಕಪ್ ಯಶಸ್ಸಿನ ಹಿಂದೆ ಹಾಗೂ ಕ್ವೀನ್ಸ್‌ಲ್ಯಾಂಡ್ ಪರ ಅಮೋಘ ಪ್ರದರ್ಶನ ತೋರಿದ್ದರು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರಾದ ರಾಡ್ ಮಾರ್ಷ್ ಹಾಗೂ ಶೇನ್ ವಾರ್ನ್ ಕೊನೆಯುಸಿರೆಳೆದು ತಿಂಗಳುಗಳ ಅಂತರದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಆಂಡ್ರ್ಯೂ ಸೈಮಂಡ್ಸ್ ಕೊನೆಯುಸಿರೆಳೆದಿದ್ದಾರೆ. ದುರಾದೃಷ್ಟವಶಾತ್, ಈ ವರ್ಷ ನಾವು ಈ ರೀತಿಯ ಹಲವು ದುರಂತಗಳಿಗೆ ಸಾಕ್ಷಿಯಾಗಿದ್ದೇವೆ. ನಾನು ಈ ವಿಚಾರವನ್ನು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಇದು ಕ್ರಿಕೆಟ್ ಲೋಕದ ಮತ್ತೊಂದು ದುರಂತ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಾರ್ಕ್ ಟೇಲರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆಂಡ್ರ್ಯೂ ಸೈಮಂಡ್ಸ್, ಆಸ್ಟ್ರೇಲಿಯಾ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿದ್ದರು. ಬೌಲಿಂಗ್‌ನಲ್ಲಿ ಸಮಯಕ್ಕೆ ತಕ್ಕಂತೆ ಆಫ್ ಸ್ಪಿನ್ ಹಾಗೂ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಿದ್ದ ಸೈಮಂಡ್ಸ್, ಬ್ಯಾಟಿಂಗ್‌ನಲ್ಲಿ ಸ್ಪೋಟಕ ಇನಿಂಗ್ಸ್ ಆಡುವ ಮೂಲಕ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಿಸಿಕೊಟ್ಟಿರುವ ಇತಿಹಾಸ ಹೊಂದಿದ್ದಾರೆ.
0 comments:
Post a Comment