ಬಂಟ್ವಾಳ, ಮೇ 18, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ಕಚೇರಿಗೆ ಸೋಮವಾರ ಸುರಿದ ಭಾರೀ ಮಳೆಯ ನೀರು ನುಗ್ಗಿ ಸಂಪೂರ್ಣ ಅಸ್ತವ್ಯಸ್ತಗೊಂಡ ದೃಶ್ಯ ಕಂಡುಬಂತು.
ಮಾರ್ನಬೈಲು ಬಳಿ ಇರುವ ಸಜಿಪಮುನ್ನೂರು ಗ್ರಾಮ ಪಂಚಾಯತ್ ಕಚೇರಿ ಬಳಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಸಂಪೂರ್ಣವಾಗಿ ರಸ್ತೆಯಲ್ಲಿ ಕೃತಕ ನೆರೆಯಾಗಿ ಹರಿದು ಹೋಗಿದ್ದು, ಪಂಚಾಯತ್ ಕಚೇರಿ ಒಳಗೂ ನೀರು ನುಗ್ಗಿದ ದೃಶ್ಯ ಕಂಡು ಬಂತು. ಪಂಚಾಯತ್ ಅಧ್ಯಕ್ಷರು ಊರಿನಲ್ಲಿ ಇಲ್ಲದೆ ವಿದೇಶ ಪ್ರವಾಸದಲ್ಲಿದ್ದಾರೆ ಎನ್ನಲಾಗಿದ್ದು, ಉಪಾಧ್ಯಕ್ಷರ ಸಹಿತ ಆಡಳಿತ ಪಕ್ಷದ ಸದಸ್ಯರು ಏನೂ ಮಾಡಲಾಗದ ಪರಿಸ್ಥಿತಿ ಎದುರಿಸಿದರೆ, ವಿರೋಧ ಪಕ್ಷದ ಸದಸ್ಯರು ತಮ್ಮದೇ ಶಾಸಕರು, ಸರಕಾರ ಎಲ್ಲ ಇದ್ದರೂ ಕಾದುನೋಡುವ ತಂತ್ರ ಉಪಯೋಗಿಸಿದ್ದಾರೆ. ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ಮಗುಮ್ಮಾಗಿದ್ದರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವತಃ ಪಂಚಾಯತ್ ಕಚೇರಿಯನ್ನೇ ಮಳೆ ನೀರಿನಿಂದ ರಕ್ಷಿಸಲು ಸಾಧ್ಯವಾಗದ ಆಡಳಿತದಿಂದ ಇನ್ನು ಗ್ರಾಮದ ಜನರ ಬವಣೆಯನ್ನು ಯಾವ ರೀತಿ ನಿಭಾಯಿಸಿಯಾರು. ಅದೂ ಕೂಡಾ ಮುಂಗಾರು ಪೂರ್ವ ಮಳೆಗೇ ಇಂತಹ ಪರಿಸ್ಥಿತಿಯಾದರೆ ಇನ್ನು ಪೂರ್ಣ ಮುಂಗಾರು ಪ್ರಾರಂಭವಾದರೆ ಇಲ್ಲಿನ ಪರಿಸ್ಥಿತಿ ಏನಾಗಬಹುದು ಎಂದು ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಇಲ್ಲಿನ ಪಂಚಾಯತ್ ಕಚೇರಿಯ ಅವ್ಯವಸ್ಥೆ ಬಗ್ಗೆ ತೀವ್ರ ನಿಗಾ ವಹಿಸಿ ಸೂಕ್ತ ಕ್ರಮ ವಹಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
0 comments:
Post a Comment