ಬಂಟ್ವಾಳ, ಮೇ 01, 2022 (ಕರಾವಳಿ ಟೈಮ್ಸ್) : ಇಫ್ತಾರ್ ಆಯೋಜನೆ ಮುಸ್ಲಿಮರ ಓಲೈಕೆಯೂ ಅಲ್ಲ, ಗಣೇಶೋತ್ಸವ ಆಯೋಜನೆ ಹಿಂದುಗಳ ಓಲೈಕೆಯೂ ಇಲ್ಲ, ಒಟ್ಟಿನಲ್ಲಿ ಇದರ ಹಿಂದೆ ರಾಜಕೀಯ ಸ್ವಾರ್ಥ ಹಿತಾಸಕ್ತಿಯೂ ಇಲ್ಲ, ಜಾತ್ಯಾತೀತ ಭಾರತದ ಸೌಹಾರ್ದ ಪರಂಪೆಯನ್ನು ಮನಸಾರೆ ಒಪ್ಪಿಕೊಂಡು ದೇಶದ ಸೌಹಾರ್ದತೆ-ಸಮಗ್ರತೆಗೆ ವಿಶೇಷ ಕೊಡುಗೆ ನೀಡಿದ ದೇಶದ ಇತಿಹಾಸವಾಗಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಓರ್ವ ತಳಮಟ್ಟದ ಕಾರ್ಯಕರ್ತನಾಗಿದ್ದು ಇಲ್ಲಿನ ಎಲ್ಲ ವರ್ಗದ ಜನರ ಭಾವನೆಗಳನ್ನು ಒತ್ತು ಕೊಟ್ಟು ಮಾಡುವ ಎಲ್ಲ ಕಾರ್ಯಕ್ರಮಗಳೂ ಕೇವಲ ಮನೋ ನೆಮ್ಮದಿಗಾಗಿ ಮಾತ್ರ ಮಾಡುತ್ತಿರುವುದಾಗಿದೆ ಎಂದು ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಶನಿವಾರ ಸಂಜೆ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ತಮ್ಮ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸೌಹಾರ್ದ ಇಪ್ತಾರ್ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೀವನದಲ್ಲಿ ತಾನೋರ್ವನೇ ಆಡಂಬರದಿಂದ ಜೀವಿಸಿದರೆ ಮಾನಸಿಕ ನೆಮ್ಮದಿ ಸಾಧ್ಯವಿಲ್ಲ. ಸರ್ವರ ಏಳಿಗೆಯೊಂದಿಗೆ ಬಡವರ-ಶೋಷಿತರ, ಮರ್ದಿತರ ಮನಸ್ಸಿನ ನೆಮ್ಮದಿಯೊಂದಿಗೆ ಜೀವಿಸಿದಾಗ ಜೀವನ ಧನ್ಯಗೊಳ್ಳಲು ಸಾಧ್ಯ ಎಂಬ ಸರಳ ಸತ್ಯವನ್ನು ಮನಗಂಡು ಮಾತ್ರ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆ ಮೂಲಕ ಜನರ ಸೇವೆಗಾಗಿ ಮಾತ್ರ ಬಂದಿರುವ ನಾನು ಆ ನಿಟ್ಟಿನಲ್ಲಿ ಆಹೋ-ರಾತ್ರಿಯೂ ಕೆಲಸ ನಿರ್ವಹಿಸಿದ್ದೇನೆ. ಮುಂದೆಯೂ ನಿರ್ವಹಿಸುತ್ತೇನೆ. ರಾಜಕೀಯ ಸ್ಥಾನಮಾನಗಳೇನಿದ್ದರೂ ಜನರ ಪ್ರೀತಿ-ವಿಶ್ವಾಸದಿಂದ ಮಾತ್ರ ಪಡೆದುಕೊಂಡಿದ್ದೇನೆ ಹೊರತು ಯಾರನ್ನೂ ಓಲೈಕೆ ಮಾಡುವ ಮೂಲಕ ಪಡೆದುಕೊಂಡಿಲ್ಲ ಎಂದರು.
ಬಂಟ್ವಾಳದ ಜನ 6 ಬಾರಿ ಚುನಾಯಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಪಕ್ಷ 8 ಬಾರಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಜನಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಜನ ಹಾಗೂ ಪಕ್ಷದ ಮೇಲೆ ವಿಶೇಷ ಋಣ ನನ್ನಲ್ಲಿ ಇನ್ನೂ ಬಾಕಿ ಉಳಿದಿದೆ. ಆಯುಷ್ಯ ಪೂರ್ತಿ ಜನಸೇವೆ ಮಾಡಿದರೂ ಜನರ ಹಾಗೂ ಪಕ್ಷದ ಮೇಲಿನ ಋಣ ತೀರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮನಸಾರೆ ಅರ್ಥ ಮಾಡಿಕೊಂಡು ಮನೋ ನೆಮ್ಮದಿಗಾಗಿ ಎಲ್ಲ ವರ್ಗದ ಜನರ ಪರವಾಗಿ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಲೀ, ವಿವಿಧ ವರ್ಗದ ಜನರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಲೀ ಮಾಡುತ್ತಲೇ ಇರುತ್ತೇನೆ. ಇದರಲ್ಲಿ ಯಾವುದೇ ಸ್ವಾರ್ಥವಾಗಲೀ, ರಾಜಕೀಯ ಸ್ಯಯಂ ಏಳಿಗೆಯ ಉದ್ದೇಶವಾಗಲೀ ಇಲ್ಲವೇ ಇಲ್ಲ ಎಂದ ರಮಾನಾಥ ರೈ ಇತ್ತೀಚೆಗೆ ಪಕ್ಷ ಮತ್ತೆ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ನೀಡುವ ಮೂಲಕ ಮತ್ತಷ್ಟು ಜವಾಬ್ದಾರಿ ನೀಡಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಹರಸಿದರೆ ಮುಂದಿನ ದಿನಗಳಲ್ಲಿಯೂ ರಾಜಕೀಯದಲ್ಲಿದ್ದುಕೊಂಡು ಜನಸೇವೆ ಮಾಡಲು ಇಚ್ಛಾ ಶಕ್ತಿ ಇನ್ನೂ ಕೂಡಾ ನನ್ನಲ್ಲಿ ಉಳಿದಿದೆ ಎಂದು ಅಪಪ್ರಚಾರ ನಡೆಸುವ ಮಂದಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಕಳೆದ ಬಾರಿ ಚುನಾವಣೆಯಲ್ಲಿ ಸೋಲಾದರೂ ಕೂಡಾ ನನ್ನ ಕ್ಷೇತ್ರದ ಜನರನ್ನು ನಾನೆಂದೂ ಮರೆತಿಲ್ಲ. ಸೋತಿದ್ದೇನೆ ಎಂದು ಯಾರ್ಯಾರ ಮೇಲೋ ಗೂಬೆ ಕೂರಿಸುತ್ತಾ ಕೈ ಕಟ್ಟಿಯೂ ಕುಳಿತಿಲ್ಲ. ಜನಪರವಾಗಿ ನನ್ನ ಜವಾಬ್ದಾರಿ ಏನಿದೆಯೋ ಅದೆಲ್ಲವನ್ನೂ ನೆರವೇರಿಸುತ್ತಲೇ ಬಂದಿದ್ದೇನೆ. ಕೇವಲ ರಾಜಕೀಯ-ಅಧಿಕಾರದ ಆಸೆ ಆಕಾಂಕ್ಷೆ ಇದ್ದಿದ್ದರೆ ಎಲ್ಲರಂತೆ ನಾನು ಕೂಡಾ ನಾಲ್ಕು ವರ್ಷಗಳ ಕಾಲ ಯಾವುದಾದರೂ ಉದ್ಯಮ ಮಾಡಿ ಬೇಕದಷ್ಟು ಸಂಪಾದಿಸಿ ಚುನಾವಣಾ ವರ್ಷದಲ್ಲಿ ಹಣದ ಹೊಳೆ ಹರಿಸಿ ಮತ್ತೆ ರಾಜಕೀಯ ಎಂಟ್ರಿ ಪಡೆಯುವ ಎಲ್ಲ ಅವಕಾಶಗಳೂ ಇದ್ದೇ ಇದೆ. ಆದರೆ ರಮಾನಾಥ ರೈ ಹಾಗೆ ಮಾಡಿಲ್ಲ. ಮಾಡಿದ್ದಕ್ಕಿಂತ ಕಳೆದುಕೊಂಡದ್ದೇ ಜಾಸ್ತಿ. ಆದರೆ ಜನರ ಪ್ರೀತಿ-ವಿಶ್ವಾಸ ಎಂದಿಗೂ ಕಳೆದುಕೊಂಡಿಲ್ಲ. ಅದಕ್ಕಿಂತ ನೆಮ್ಮದಿ ಈ ಲೋಕದಲ್ಲಿ ಇನ್ನೊಂದಿಲ್ಲ. ಒಂದೇ ಒಂದು ಅವಧಿಯಲ್ಲಿ ರಾಜಕೀಯ ಸ್ಥಾನಮಾನ ಪಡೆದುಕೊಂಡು ಜೀವಮಾನವಿಡೀ ಕುಟುಂಬ ಪರಂಪರೆ ತಿಂದರೂ ಮುಗಿಯದಷ್ಟು ಸಂಪತ್ತು ಕೂಡಿಟ್ಟ ಜನರಿಗಾಗಿ ಏನೂ ಮಾಡದವರು ಇವತ್ತು ಮೌಲ್ಯದ ಪಾಠ ಮಾಡುವವರಿದ್ದಾರೆ. ಆದರೆ ಅಂತಹ ಅನುಮೋದನೆ ರಮಾನಾಥ ರೈಗೆ ಬೇಕಾಗಿಲ್ಲ. ಎಲ್ಲ ವರ್ಗದ ಜನರ ಮನಸ್ಸಿನಲ್ಲಿ ರಮಾನಾಥ ರೈ ಗೆ ಒಂದು ಸ್ಥಾನ ಯಾವತ್ತೂ ಸಿಕ್ಕಿದೆ ಅದುವೇ ಶಾಶ್ವತ ಎಂದು ಮನಸ್ಸಿನ ಅಂತರಾಳ ಬಿಚ್ಚಿಟ್ಟರು.
ರಾಜಕೀಯದಲ್ಲಿ ಸೋಲು-ಗೆಲುವು, ಅಧಿಕಾರ-ಅಂತಸ್ತು ಅದೆಲ್ಲವೂ ಕೇವಲ ಕ್ಷಣಿಕ. ಅಧಿಕಾರ ಇದ್ದ ಅವಧಿಯಲ್ಲಿ ಗಳಿಸಿಕೊಂಡ ಜನರ ಪ್ರೀತಿ-ವಿಶ್ವಾಸ ಮಾತ್ರ ಶಾಶ್ವತವಾಗಿದೆ. ನನ್ನ ಅಧಿಕಾರವಾಧಿಯಲ್ಲಿ ಸಂಪತ್ತು ಗಳಿಕೆಗೆ ಯಾವತ್ತೂ ಒತ್ತುಕೊಟ್ಟವನಲ್ಲ. ಜನರ ಪ್ರೀತಿಗೆ ಮಾತ್ರ ಒತ್ತು ಕೊಟ್ಟು ಕೆಲಸ ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.
ಸಮಾಜದಲ್ಲಿ ಮನುಷ್ಯ ಮನಸ್ಸುಗಳ ನಡುವೆ ಕಂದಕ ಸೃಷ್ಟಸಿ ರಾಜಕೀಯ ಲಾಭ ಪಡೆದು ಇಲ್ಲಿ ಸಾಧಿಸಲಿಕ್ಕೇನೂ ಉಳಿದಿಲ್ಲ. ಸ್ಥಾನಮಾನಗಳು ನಷ್ಟ ಹೊಂದಿದರೂ ಪರವಾಗಿಲ್ಲ, ಸಮಾಜವನ್ನು ಪೋಣಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಹೋರಾಟ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ರಾಜಕೀಯವಾಗಿ ಮಾಡುವ ಕಾರ್ಯಕ್ರಮಗಳನ್ನೂ ಮಾಡಲಾಗಿದೆ, ಧಾರ್ಮಿಕವಾಗಿ ನಾಗಮಂಡಲೋತ್ಸವ, ಗಣೇಶೋತ್ಸವ, ಇಫ್ತಾರ್ ಮೊದಲಾದವುಗಳನ್ನು ಮಾಡಲಾಗಿದೆ. ಸಾಂಸ್ಕøತಿಕವಾಗಿ ಕಂಬಳ ಕ್ರೀಡೆಯಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಕಲಾಸಕ್ತರ ಬೇಡಿಕೆಯಂತೆ ನಿಂತು ಹೋಗಿದ್ದ ಕಂಬಳ ಕ್ರೀಡೆಯನ್ನು ಈ ಬಾರಿ ಮತ್ತೆ ಕೇವಲ 24 ದಿನಗಳ ಒಳಗಿನ ವ್ಯವಸ್ಥೆಗಳೊಂದಿಗೆ ಪುನರಾರಂಭಿಸಿ ಅಭೂತಪೂರ್ವ ಯಶಸ್ಸನ್ನೂ ಕಾಣಲಾಗಿದೆ. ಇದೆಲ್ಲವೂ ಭಗವಂತನ ಕೃಪೆ ಎಂದೇ ಹೇಳುವೆ ಹೊರತು ರಮಾನಾಥ ರೈ ಸಾಧನೆ ಎಂದು ಜಂಭಕೊಚ್ಚಿಕೊಳ್ಳಲಾರೆ ಎಂದ ಮಾಜಿ ಸಚಿವ ರೈ, ಅಧಿಕಾರದಲ್ಲಿರುವ ಸಂದರ್ಭ ಕೈಯಲ್ಲಾದ ಮಟ್ಟಿಗೆ ಶಕ್ತಿ ಮೀರಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ. ಇದಕ್ಕೆ ಕ್ಷೇತ್ರದ ಜನರೇ ಸಾಕ್ಷಿ ಹೊರತು ಸ್ವಾರ್ಥ ರಾಜಕಾರಣಕ್ಕಾಗಿ ಸರ್ಟಿಫಿಕೇಟ್ ಕೊಡುವವರಲ್ಲ ಎಂದು ಮಾರ್ಮಿಕವಾಗಿ ನುಡಿದರು.
ನಿರೀಕ್ಷೆಗೂ ಮೀರಿದ ಮಂದಿ ಜಾತಿ-ಧರ್ಮ ಬೇಧ ಮರೆತು ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೈಸ್ತ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ, ಮುಸ್ಲಿಂ ಧರ್ಮಗುರು ಪಕ್ರುದ್ದೀನ್ ದಾರಿಮಿ, ಚಲನಚಿತ್ರ ನಟ ತಮ್ಮಣ್ಣ ಶೆಟ್ಟಿ ಶುಭಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸದಸ್ಯ ಐವನ್ ಡಿ’ಸೋಜ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಹಸೈನಾರ್ ತಾಳಿಪಟ್ಪು, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಎಂ ಎಸ್ ಮುಹಮ್ಮದ್, ಸುದರ್ಶನ್ ಜೈನ್, ಹಾಜಿ ಪಿ ಎಸ್ ಅಬ್ದುಲ್ ಹಮೀದ್, ಬಿ ಎಂ ಅಬ್ಬಾಸ್ ಅಲಿ, ಆಸಿಫ್ ಸೀಕೋ, ಬಾಲಕೃಷ್ಣ ಆಳ್ವ, ಸುಲೈಮಾನ್ ನೆಹರುನಗರ, ಮಮತಾ ಗಟ್ಟಿ, ಶಾಹುಲ್ ಹಮೀದ್, ಯೂಸುಫ್ ಕರಂದಾಡಿ, ಅಬ್ದುಲ್ ರಝಾಕ್ ಕುಕ್ಕಾಜೆ, ಇಕ್ಬಾಲ್ ಜೆಟಿಟಿ, ಇಬ್ರಾಹಿಂ ಗುಂಡಿ, ಹಾಶೀರ್ ಪೇರಿಮಾರ್, ಸರೇಶ್ ಪೂಜಾರಿ ಜೋರಾ, ಇಬ್ರಾಹಿಂ ನವಾಝ್ ಬಡಕಬೈಲು, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ, ಡಾ ರಘು, ಸರ್ವೋತ್ತಮ ಗೌಡ, ಕೃಷ್ಣಪ್ಪ, ಪೃಥ್ವಿ ರಾಜ್, ನಝೀರ್ ಬಜಾಲ್, ಭಾಸ್ಕರ್ ಮೊಯಿಲಿ, ಶಶಿದರ್ ಹೆಗ್ಡೆ, ಸತೀಶ್ ಕೆಡಿಂಜ, ಆಲ್ವಿನ್ ಡಿ’ಸೋಜ, ಸುರಯ್ಯಾ ಅಂಜುಂ, ಮಲ್ಲಿಕಾ ಪಕಳ, ಪದ್ಮನಾಭ ಸಾಲಿಯಾನ್, ಹನೀಫ್ ಹಾಸ್ಕೋ ಪಾಣೆಮಂಗಳೂರು, ಅಬ್ದುಲ್ ರವೂಫ್, ಡೆಂಝಿಲ್ ನೊರೊನ್ಹಾ, ಶಬೀರ್ ಸಿದ್ದಕಟ್ಟೆ, ರಂಜಿತ್ ಪೂಜಾರಿ ಬಿ ಸಿ ರೋಡು, ರಿಯಾಝ್ ನೆಹರುನಗರ, ಜಾಸಿಂ ಎನ್ ಎಂ ಸಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment