ಪುತ್ತೂರು, ಮೇ 30, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣೆಯಲ್ಲಿ 2002 ರಲ್ಲಿ ಅಪರಾಧ ಕ್ರಮಾಂಕ 85/2002 ಕಲಂ 454, 457, 380 ಜೊತೆಗೆ 34 ಐಪಿಸಿಯಂತೆ ದಾಖಲಾದ ಕಳವು ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿ ಪುತ್ತೂರು ತಾಲೂಕು, ನೆಹರುನಗರ, ಸ್ವಾಮಿ ಕಂಪೌಂಡ್ ನಿವಾಸಿ, ಪ್ರಸ್ತುತ ತಮಿಳುನಾಡು ರಾಜ್ಯದ ತಿರುನಾಳ್ ವೆಲ್ಲಿ ಜಿಲ್ಲೆಯ ವಿಜಿಪಿ ಮರ್ಫನಗರದಲ್ಲಿ ವಾಸಿಸುತ್ತರುವ ಚಿನ್ನಸ್ವಾಮಿ ಅವರ ಪುತ್ರ ಚೆನ್ನಕೇಶವ ಅಲಿಯಾಸ್ ಸೂರ್ಯರಾಜ್ ಎಂಬಾತನನ್ನು ಪುತ್ತೂರು ಪೊಲೀಸರು ಮೇ 28 ರಂದು ರಾತ್ರಿ ದಸ್ತಗಿರಿ ಮಾಡಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ತಾಲೂಕು ಕುದ್ಮಾರು-ಪಟ್ಟೆ ಮನೆ ನಿವಾಸಿ ವಸಂತ ಗೌಡ ಅವರ ಪುತ್ರ ದಾಮೋದರ ಗೌಡ ಅವರು ಪಡೀಲ್ ನಲ್ಲಿ ಗೂಡಂಗಡಿ ನಡೆಸುತ್ತಿದ್ದು 2002 ರ ಜೂನ್ 10 ರಂದು ಸಂಜೆ 7 ಗಂಟೆಗೆ ಗೂಡಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು 2002ರ ಜೂನ್ 11 ರಂದು ಬೆಳಿಗ್ಗೆ ಗೂಡಂಗಡಿಗೆ ಬಂದಾಗ ಗೂಡಂಗಡಿಯ ಬೀಗ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಅಂಗಡಿಯ ಒಳಗಿದ್ದ ಸುಮಾರು 1500 ರೂಪಾಯಿಯ ದಿನ ನಿತ್ಯದ ಸಾಮಗ್ರಿಗಳು ಕಳ್ಳತನವಾಗಿದ್ದು ಬೆಳಕಿಗೆ ಬಂದು ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ರಿ ಪ್ರಕರಣದಲ್ಲಿ ಒಟ್ಟು 4 ಮಂದಿ ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪೈಕಿ ಮೂರು ಜನ ಆರೋಪಿಗಳ ಪ್ರಕರಣವು ಖುಲಾಸೆಗೊಂಡಿದ್ದು, ಉಳಿದಂತೆ ಆರೋಪಿ ಚೆನ್ನಕೇಶವ ಎಂಬಾತ ತಲೆ ಮರೆಸಿಕೊಂಡಿದ್ದ.
ಈತನ ವಿರುದ್ದ ನ್ಯಾಯಾಲಯ ಎಲ್‍ಪಿಸಿ ನಂ 21/2009 ರಂತೆ ವಾರಂಟ್ ಹೊರಡಿಸಿತ್ತು. ಈತನ ಪತ್ತೆಗೆ ಠಾಣಾ ಎಚ್‍ಸಿ ಪರಮೇಶ್ವರ ಅವರನ್ನು ನೇಮಕ ಮಾಡಲಾಗಿತ್ತು. ಆರೋಪಿಯ ಹಾಲಿ ವಾಸದಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಜಿಲ್ಲಾ ಎಸ್ಪಿ, ಎಡಿಶನಲ್ ಎಸ್ಪಿ, ಪುತ್ತೂರು ಎಎಸ್ಪಿ ಅವರ ಮಾರ್ಗದರ್ಶನದಂತೆ ಪುತ್ತೂರು ನಗರ ಠಾಣಾ ಪಿಎಸೈ ಗಳಾದ ಸುನೀಲ್ ಕುಮಾರ್, ರಾಜೇಶ್, ನಸ್ರೀನ್ ತಾಜ್ ಅವರ ಆದೇಶದಂತೆ ಶನಿವಾರ ರಾತ್ರಿ 8 ಗಂಟೆಗೆ ಆರೋಪಿಯ ಹಾಲಿ ವಿಳಾಸದಿಂದ ಎಚ್ ಸಿ ಗಳಾದ ಪರಮೇಶ್ವರ ಜಗದೀಶ್ ಹಾಗೂ ಕೇಶವ ಅವರು ದಸ್ತಗಿರಿ ಮಾಡಿ ಠಾಣೆಗೆ ಕರೆದುಕೊಂಡು ಬಂದಿದ್ದು, ಸೋಮವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
0 comments:
Post a Comment