ನೆಲ್ಯಾಡಿ, ಮೇ 13, 2022 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾ ಪಂ ವ್ಯಾಪ್ತಿಗೆ ಒಳಪಟ್ಟ ನೆಲ್ಯಾಡಿ ಸಂತೆ ಮಾರುಕಟ್ಟೆಯ ಏಲಂದಾರರು ನಿಯಮ ಮೀರಿ ಬೇಕಾಬಿಟ್ಟಿ ದರ ವಸೂಲಿ ಮಾಡಿ ಬಡ ವ್ಯಾಪಾರಿಗಳನ್ನ ದೋಚುತ್ತಿದ್ದಾರೆ ಎಂದು ಸಂತೆ ವ್ಯಾಪಾರಿಗಳು ದೂರಿದ್ದಾರೆ.
ಪಂಚಾಯತ್ ಏಲಂನಲ್ಲಿ ಭಾಗಿಯಾಗುವ ಏಲಂದಾರರು ಸ್ವಯಂ ಪ್ರತಿಷ್ಠೆಗಾಗಿ ಪೈಪೋಟಿಯಲ್ಲಿ ಸಂತೆ ಮಾರುಕಟ್ಟೆ ಖರೀದಿಸಿ ಬಳಿಕ ಅದರ ಭಾರವನ್ನು ಬಡ ವ್ಯಾಪಾರಿಗಳ ಮೇಲೆ ಹಾಕಿ ದರ್ಪ, ಪೌರುಷ ಮೆರೆಯುತ್ತಿದ್ದಾರೆ ಎಂದು ಇಲ್ಲಿಗೆ ವ್ಯಾಪಾರಕ್ಕೆ ಬರುವ ಸಣ್ಣಪುಟ್ಟ ಬಡ ಸಂತೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಇತ್ತೀಚೆಗಿನವರೆಗೂ ಕೇವಲ 50 ರೂಪಾಯಿ ಮಾತ್ರ ನೆಲ ಬಾಡಿಗೆ ರೂಪದಲ್ಲಿ ಶುಲ್ಕ ವಸೂಲಾತಿ ಮಾಡಲಾಗುತ್ತಿತ್ತು. ಆದರೆ ತೀರಾ ಇತ್ತೀಚೆಗೆ ಏಲಂ ಪಡೆದುಕೊಂಡ ವ್ಯಕ್ತಿ ದಿನಕ್ಕೊಂದು ಶುಲ್ಕ ವಸೂಲಾತಿ ಮಾಡುತ್ತಿರುವುದರಲ್ಲದೆ ವ್ಯಾಪಾರಿಗಳನ್ನು ದಬಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇಲ್ಲಿನ ಸಂತೆ ಮಾರುಕಟ್ಟೆಗೆ ದೂರದ ಊರುಗಳಿಂದ ಸಣ್ಣ ಪುಟ್ಟ ಬಡ ವ್ಯಾಪಾರಿಗಳು ಬರುತ್ತಿದ್ದು, ಅವರಿಗೆ ಆಗುವ ವ್ಯಾಪಾರದ ಬಗ್ಗೆ ಯಾವುದೇ ನಿಖರತೆ ಇರುವುದಿಲ್ಲ. ದೂರದ ಊರುಗಳಿಂದ ಇಲ್ಲಿಗೆ ಬರಲು ಸಾಕಷ್ಟು ಪ್ರಮಾಣದಲ್ಲಿ ಸಾಗಾಟ ವೆಚ್ಚವೂ ತಗಲುತ್ತಿದ್ದು, ಇದನ್ನು ಸರಿದೂಗಿಸುವುದೇ ದುಸ್ತರವಾಗಿರುವ ಸನ್ನಿವೇಶದಲ್ಲಿ ಮಾರುಕಟ್ಟೆ ಏಲಂದಾರರ ದುಬಾರಿ ದರ ಭರಿಸಲು ಹಾಗೂ ಅವರ ದರ್ಪ-ದೌರ್ಜನ್ಯವನ್ನು ಸಹಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಅಹವಾಲು ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೊಮ್ಮೆ ಇಲ್ಲಿನ ಪಂಚಾಯತ್ ಪಿಡಿಒ ಕೂಡಾ ಸಂತೆ ವ್ಯಾಪಾರಿಗಳಿಂದ ದುಬಾರಿ ಶುಲ್ಕ ವಸೂಲಿಗೆ ಏಲಂದಾರರೊಂದಿಗೆ ಕೈ ಜೋಡಿಸಿ ಕಾನೂನು ಬಾಹಿರ ನಿಯಮ ಜಾರಿಗೊಳಿಸಿದ್ದರು. ಆದರೆ ಬಳಿಕ ವ್ಯಾಪಾರಿಗಳ ಲಿಖಿತ ಮನವಿಯಿಂದಾಗಿ ತನ್ನ ನಿಯಮದಿಂದ ಹಿಂದೆ ಸರಿದಿದ್ದರು. ಇದೀಗ ಮತ್ತೆ ವ್ಯಾಪಾರಿಗಳ ಸುಲಿಗೆ ಆರಂಭವಾಗಿದೆ ಎನ್ನುತ್ತಾರೆ ಎಲ್ಲಿನ ಸಂತೆ ವ್ಯಾಪಾರಿಗಳು.
ಇಲ್ಲಿನ ಸಂತೆ ಮಾರುಕಟ್ಟೆ ಅವ್ಯವಸ್ಥೆ ಹಾಗೂ ದುಬಾರಿ ದರ ವಿಧಿಸುವ ಬಗ್ಗೆ ತಕ್ಷಣ ಗ್ರಾ ಪಂ ಆಡಳಿತ, ತಾ ಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಧ್ಯಪ್ರವೇಶಿಸಿ ಬಡ ವ್ಯಾಪಾರಿಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಿ ನ್ಯಾಯ ಒದಗಿಸಿಕೊಡುವಂತೆ ಬಡ ಸಂತೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
0 comments:
Post a Comment