ಬಂಟ್ವಾಳ, ಮೇ 16, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಭಾನುವಾರ ರಾತ್ರಿಯಿಂದ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ಅಬ್ಬರಕ್ಕೆ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಬಳಿ ರಸ್ತೆ ಬದಿಯ ಭಾರೀ ಗಾತ್ರದ ಮಾವಿನ ಮರ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದಿದೆ. ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕೂ ಹಾನಿಯಾಗಿದ್ದು, ಪರಿಸರದಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ.
ಸ್ಥಳಕ್ಕಾಗಮಿಸಿದ ಬಂಟ್ವಾಳ ಪುರಸಭಾ ಸ್ಥಳೀಯ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ಮರ ತೆರವು ಹಾಗೂ ವಿದ್ಯುತ್ ಸಂಪರ್ಕ ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಇಲ್ಲಿನ ಮಾವಿನ ಮರ ಸಹಿತ ಕೆಲವೊಂದು ಹಳೆಯ ಕಾಲದ ಮರಗಳಿದ್ದು, ರಸ್ತೆ ಬದಿಯಲ್ಲೇ ಇರುವುದರಿಂದ ಅಪಾಯದ ಮುನ್ಸೂಚನೆಯೂ ಇತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಈಗಾಗಲೇ ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದು, ರೆಂಬೆ-ಕೊಂಬೆಗಳ ತೆರವಿಗೆ ಆಗ್ರಹಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇದ್ದ ಪರಿಣಾಮ ಇದೀಗ ರಾತ್ರಿ ಸಮಯದಲ್ಲಿ ಮರವೊಂದು ಹಠಾತ್ ಆಗಿ ಉರುಳಿ ಬಿದ್ದಿದೆ. ರಾತ್ರಿ ಹೊತ್ತಿನಲ್ಲಿ ಮರ ಉರುಳಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದ್ದು ಸ್ಥಳೀಯರು ನಿಟ್ಟುಸಿರುವ ಬಿಟ್ಟಿದ್ದಾರೆ. ಇದೇ ಪರಿಸರದಲ್ಲಿದ್ದ ಇನ್ನೊಂದು ಮಾವಿನ ಮರದ ಕೊಂಬೆಗಳು ವಿದ್ಯುತ್ ಪರಿವರ್ತಕಕ್ಕೆ ತಾಗಿಕೊಂಡಿರುವುದನ್ನು ಗಮನಿಸಿದ ಮಾಜಿ ಕೌನ್ಸಿಲರ್ ಚಂಚಲಾಕ್ಷಿ ಅವರು ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆದಿದ್ದರಿಂದ ಇತ್ತೀಚೆಗಷ್ಟೆ ಮೆಸ್ಕಾಂ ಇಲಾಖಾ ಸಿಬ್ಬಂದಿಗಳು ಇದರ ರೆಂಬೆ-ಕೊಂಬೆಗಳನ್ನು ಕಡಿದು ಸಂಭಾವ್ಯ ಅಪಾಯಕ್ಕೆ ತಡೆ ನೀಡಿದ್ದರು.
0 comments:
Post a Comment