ಉಡುಪಿ, ಮೇ 09, 2022 (ಕರಾವಳಿ ಟೈಮ್ಸ್) : 48 ಗಂಟೆಗಳ ಮೊದಲು ಉಡುಪಿ ಜಿಲ್ಲೆಯ ಮಲ್ಪೆ ಬೀಚಿನಲ್ಲಿ ಲೋಕಾರ್ಪಣೆಗೊಂಡು ಸಾರ್ವಜನಿಕರಿಗೆ ಸಮರ್ಪಣೆಯಾಗಿದ್ದ ರಾಜ್ಯದ ಮೊಟ್ಟ ಮೊದಲ ತೇಲುವ ಸೇತುವೆ ಸಮುದ್ರದ ಭೀಕರ ಅಲೆಗಳಿಗೆ ಸಿಲುಕಿ ಕಿತ್ತುಕೊಂಡು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಉಡುಪಿಯ ಮಲ್ಪೆ ಬೀಚಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಇತ್ತೀಚೆಗಷ್ಟೇ ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ (Karnataka’s first floating bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದೀಗ ಈ ತೇಲುವ ಸೇತುವೆ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಕಿತ್ತುಕೊಂಡು ಬಂದಿದೆ. ಹೀಗಾಗಿ ತೇಲುವ ಸೇತುವೆ ಬಳಿ ಪ್ರವಾಸಿಗರ ಪ್ರವೇಶ ಬಂದ್ ಮಾಡಲಾಗಿದೆ. ಭಾನುವಾರ ಸಂಜೆಯಿಂದಲೇ ತೇಲುವ ಸೇತುವೆ ಬಂದ್ ಆಗಿದೆ.
ಸೇತುವೆಗೆ ಅಳವಡಿಸಿರುವ ಬ್ಲಾಕ್‍ಗಳು ಚೆಲ್ಲಾಪಿಲ್ಲಿಯಾಗಿದ್ದು, ಇದರ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೀಗಿರುತ್ತಾ ನಿರ್ವಹಣೆಯ ದೃಷ್ಟಿಯಿಂದ ತೇಲುವ ಸೇತುವೆ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ನಿರ್ವಾಹಕರು ಮಾಹಿತಿ ನೀಡಿದ್ದಾರೆ. ತೇಲುವ ಸೇತುವೆಯನ್ನು ಪೋಂಟೋನ್ಸ್ ಬ್ಲಾಕ್ ಗಳಿಂದ ಮಾಡಲಾಗಿತ್ತು. ಈ ಬ್ಲಾಕ್ ಗಳು ಅಲೆಗಳ ಒತ್ತಡಕ್ಕೆ ಸಿಲುಕಿ ಕಿತ್ತು ಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ತೇಲುವ ಸೇತುವೆ ಚಾಲನೆಗೊಂಡ ಬೆನ್ನಲ್ಲೇ ಭಾರೀ ಸದ್ದು ಮಾಡಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿತ್ತು. ಕೇರಳದ ಬೇಪೋರ್ ಬೀಚ್ (kerala beypore beach) ಬಿಟ್ಟರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇರಲಿಲ್ಲ. ಕೆಲವೊಂದು ಹಿನ್ನೀರಿನ ಪ್ರದೇಶಗಳಲ್ಲಿ ಈ ಥರದ ಸೇತುವೆ ಅಳವಡಿಸಿದ್ದರೂ ಸಮುದ್ರದ ಅಲೆಗಳ ಮೇಲೆ ನಡೆದ ರೋಚಕ ಅನುಭವ ಅಲ್ಲಿ ಸಿಗುವುದಿಲ್ಲ. ಇನ್ನು ಮಲ್ಪೆಯಲ್ಲಿ ನಿರ್ಮಾಣವಾದ ಈ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಹೆಚ್ಚಿನ ಸಾಂದ್ರತೆಯ ಪೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿತ್ತು. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದಿತ್ತು.
ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದ್ದು, ಒಬ್ಬರು ನೂರು ರೂಪಾಯಿ ಪಾವತಿಸಿ, 15 ನಿಮಿಷಗಳ ಕಾಲ ಸೇತುವೆ ಮೇಲೆ ಕಳೆಯಲು ಅವಕಾಶ ಕಲ್ಪಿಸಲಾಗಿತ್ತು. ಸೇತುವೆ ಅಕ್ಕಪಕ್ಕದಲ್ಲಿ ಹತ್ತು ಮಂದಿ ಲೈಫ್ ಗಾರ್ಡ್ ಗಳು ಇರುತ್ತಾರೆ. ಸ್ಥಳೀಯರ ನೆರವಿನೊಂದಿಗೆ ಈ ತೇಲುವೆ ಸೇತುವೆಯನ್ನು ನಿರ್ಮಾಣ ಮಾಡಿದ್ದು ಸಮುದ್ರದ ಅಲೆಗಳ ಉಬ್ಬರ ಇಳಿತಕ್ಕೆ ಹೊಂದಿಕೊಂಡು ಮೋಜು ಮಸ್ತಿ ಮಾಡುವುದು ಪ್ರವಾಸಿಗರಿಗೆ ಅಪೂರ್ವ ಅನುಭವ ನೀಡಿತ್ತು.
0 comments:
Post a Comment