ಬಂಟ್ವಾಳ, ಮೇ 25, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಂಜಿಕಲ್ಲು ಗ್ರಾಮದ ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಒ) ಕೊನೆಗೂ ಮೈ ಚಳಿ ಬಿಟ್ಟು ಎಚ್ಚೆತ್ತುಕೊಂಡಿದ್ದಾರೆ. ಗ್ರಾಮದ ಮುಕುಡ ಎಂಬಲ್ಲಿ ಖಾಸಗಿ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಬಾಯಿ ತೆರೆದ ಸ್ಥಿತಿಯಲ್ಲಿದ್ದ ಕೊಳವೆ ಬಾವಿಗೆ ಮಂಗಳವಾರ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪಂಚಾಯತ್ ಪಿಡಿಒ ಅವರು ಸ್ಥಳೀಯರ ಪಾಲಿಗೆ ಮರಣ ಮೃದಂಗ ಭಾರಿಸುವಂತಿದ್ದ ತೆರೆದ ಕೊಳವೆಯನ್ನು ಮುಚ್ಚುವ ಕೆಲಸ ಕೈಗೊಂಡಿದ್ದಾರೆ.
ಗ್ರಾಮದ ಖಾಸಗಿ ಜಾಗದ ಸಾರ್ವಜನಿಕ ಸ್ಥಳದಲ್ಲಿ ಕೆಲ ಸಮಯಗಳಿಂದ ಈ ತೆರೆದ ಕೊಳವೆ ಬಾವಿ ಅಪಾಯಕಾರಿಯಾಗಿ ಬಾಯಿ ತೆರೆದ ಸ್ಥಿತಿಯಲ್ಲಿತ್ತು. ಇದನ್ನು ಮುಚ್ಚಿಸುವಂತೆ ಸ್ಥಳೀಯ ನಿವಾಸಿ ಮೆಲ್ವಿನ್ ದಿನೇಶ್ ಲೋಬೋ ಅವರು ಪಂಚಾಯತ್ ಪಿಡಿಒ ಅವರಿಗೆ ಲಿಖಿತ ದೂರು ನೀಡಿದ್ದರು. ತೆರೆದ ಕೊಳವೆ ಬಾವಿ ಇರುವ ಜಾಗ ಖಾಸಗಿ ವ್ಯÀಕ್ತಿಗೆ ಸೇರಿದ್ದರಿಂದ ಸಂಬಂಧಪಟ್ಟ ಖಾಸಗಿ ವ್ಯಕ್ತಿಯಿಂದಲೇ ಅದನ್ನು ಮುಚ್ಚುವ ವ್ಯವಸ್ಥೆಯನ್ನು ಪಂಚಾಯತ್ ಅಧಿಕಾರಿಗಳು ಮಾಡಬೇಕಾಗಿತ್ತು. ಆದರೆ ದೂರು ನೀಡಿ ವಾರಗಳು ಕಳೆದರೂ ಪಂಚಾಯತ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಈ ಬಗ್ಗೆ ಮಾಧ್ಯಮಗಳ ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಸೋಮವಾರ ಕರಾವಳಿ ಟೈಮ್ಸ್ ಸಹಿತ ವಿವಿಧ ಮಾಧ್ಯಮಗಳಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ಮಾಧ್ಯಮ ವರದಿಗಳಿಂದ ಪ್ರಕರಣದ ಗಂಭೀರತೆ ಅರಿತ ಹಿರಿಯ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನಲೆಯಲ್ಲಿ ಮಂಗಳವಾರ ಪೊಲೀಸರ ಸಮ್ಮುಖದಲ್ಲಿ ಇಲ್ಲಿನ ತೆರೆದ ಕೊಳವೆ ಬಾಯಿಯನ್ನು ಮುಚ್ಚುವ ಕಾರ್ಯ ನಡೆಸಲಾಗಿದೆ.
ಈ ತೆರೆದ ಕೊಳವೆ ಬಾವಿ ಇರುವ ಪ್ರದೇಶದಲ್ಲಿ ಹಣ್ಣುಗಳ ಮರಗಳೂ ಇರುವುದರಿಂದ ಹಣ್ಣು ಕೀಳಲು ಮಕ್ಕಳಾಟಿಕೆಯಲ್ಲಿ ತೆರಳುವ ಸಣ್ಣ ಮಕ್ಕಳು ಅಪಾಯ ಎದುರಿಸುವ ಸಾಧ್ಯತೆಯೂ ನಿಚ್ಚಳವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಪಂಚಾಯತ್ ಪಿಡಿಇ ಅವರು ಸುರಕ್ಷತಾ ಕ್ರಮ ಕೈಗೊಂಡಿದ್ದರಿಂದ ಸ್ಥಳೀಯರು ನಿಟ್ಟುಸಿರುವ ಬಿಟ್ಟಿದ್ದಾರೆ.
0 comments:
Post a Comment