ಬಂಟ್ವಾಳ, ಮೇ 18, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ನಿವೃತ್ತ ಸಹ ಮುಖ್ಯೋಪಾಧ್ಯಾಯ ಬೊಳ್ಳಾರ್ ಶ್ರೀನಿವಾಸ ನಾೈಕ್ (ಬಯೋಲಾಜಿ ಮಾಸ್ಟರ್) (80) ಅವರು ಅನಾರೋಗ್ಯದಿಂದ ಬುಧವಾರ (ಮೇ 18) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಸುಮಾರು 30 ವರ್ಷಗಳಿಗೂ ಅಧಿಕ ಕಾಲ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು, ಪ್ರಮುಖವಾಗಿ ವಿಜ್ಞಾನ ವಿಭಾಗದ ಬಯೋಲಾಜಿ ವಿಷಯವನ್ನು ಬೋಧಿಸುವುದರ ಜೊತೆಗೆ ಆಂಗ್ಲ ಭಾಷಾ ವಿಷಯನ್ನೂ ಕೂಡಾ ಬೋಧಿಸುತ್ತಿದ್ದರು. ವಿದ್ಯಾರ್ಥಿಗಳಿಂದ ಬಯೋಲಾಜಿ ಮಾಸ್ಟರ್ ಎಂದೇ ಕರೆಸಿಕೊಳ್ಳುತ್ತಿದ್ದ ಇವರು ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಅಧ್ಯಾಪಕರಾಗಿ ಗುರುತಿಸಿಕೊಂಡಿದ್ದರಲ್ಲದೆ ಭೋದಕ ಹಾಗೂ ಬೋಧಕೇತರ ಸಿಬ್ಬಂದಿಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಶಾರದಾ ಪ್ರೌಢಶಾಲೆಯಲ್ಲಿ ನಿವೃತ್ತಿ ಪಡೆದ ಬಳಿಕ ಸಮೀಪದ ಶ್ರಿ ಲಕ್ಷ್ಮೀದೇವಿ ನರಸಿಂಹ ಪೈ (ಎಸ್ ಎಲ್ ಎನ್ ಪಿ) ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಪ್ರಗತಿಪರ ಕೃಷಿಕರಾಗಿರುವ ಇವರು ಬೋಳಂಗಡಿ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ವಿದ್ಯಾರ್ಥಿ ವೃಂದ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.
ಶೋಕಾರ್ಥ ಎರಡೂ ಶಾಲೆಗಳಿಗೂ ಗುರುವಾರ (ಮೇ 19) ರಜೆ
ಅಧ್ಯಾಪಕ ಶ್ರೀನಿವಾಸ್ ನಾೈಕ್ ಅವರ ನಿಧನಕ್ಕೆ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಎಸ್ ಎಲ್ ಎನ್ ಪಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳು ತೀವ್ರ ಸಂತಾಪ ಸೂಚಿಸಿದ್ದು, ಶೋಕಾರ್ಥವಾಗಿ ಎರಡೂ ಶಾಲೆಗಳಿಗೂ ಮೇ 19 ರಂದು ಗುರುವಾರ ರಜೆ ಘೋಷಿಸಲಾಗಿದೆ.
0 comments:
Post a Comment