ಬಂಟ್ವಾಳ ಅಕ್ರಮ ಮರಳುಗಾರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಬಂಟ್ವಾಳ, ಮೇ 12, 2022 (ಕರಾವಳಿ ಟೈಮ್ಸ್) : ಪ್ರಗತಿಪರ ಕೃಷಿಕ ಎಂಬ ಹೆಸರಿನಲ್ಲಿ ವ್ಯಾಪಾರ ನಡೆಸುವವರ ಸುತ್ತ ಇರುವವರೆಲ್ಲರೂ ಅಕ್ರಮ ವ್ಯಾಪಾರಿಗಳೇ ಹೀಗಿರುವಾಗ ಅದೇಗೆ ರಾಜಧರ್ಮ ಪಾಲನೆ ಸಾಧ್ಯ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಬಂಟ್ವಾಳ ಶಾಸಕರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕಡೇಶ್ವಾಲ್ಯ ಹಾಗೂ ಬರಿಮಾರಿನಲ್ಲಿ ನಡೆಯುತ್ತಿರುವ ಬಂಟ್ವಾಳ ಶಾಸಕರ ಆಪ್ತರ ಅಕ್ರಮ ಮರಳುಗಾರಿಕೆ ವಿರುದ್ದ ಬುಡೋಳಿ ಜಂಕ್ಷನ್ನಿನಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಶಾಸಕರ ಸುತ್ತ ನಾಲ್ಕು ಮಂದಿ ಅಕ್ರಮ ಮರಳುಗಾರಿಕಾ ವ್ಯಾಪಾರಿಗಳು ಹಾಗೂ ನಾಲ್ಕು ಮಂದಿ ಅಕ್ರಮ ಜೂಜು ಅಡ್ಡೆಗಳನ್ನು ನಡೆಸುವವರೇ ಇದ್ದು, ಮತ್ತೆ ರಾಜಧರ್ಮ ಪಾಲನೆಯ ಮಾತುಗಳನ್ನಾಡುವುದು ವ್ಯಂಗ್ಯವಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು.
ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಮಾತನಾಡಿ, ಯಾವುದೇ ಜನಾದೇಶ ಇಲ್ಲದೆ ಇತರ ಪಕ್ಷಗಳ ಶಾಸಕರನ್ನು ಅಕ್ರಮವಾಗಿಯೇ ಖರೀದಿಸಿ ಸರಕಾರ ರಚಿಸಿರುವ ಬಿಜೆಪಿ ಅಡಿಯಿಂದ ಮುಡಿವರೆಗೂ ಅಕ್ರಮಗಳನ್ನೇ ಮೈಗೂಡಿಸಿಕೊಂಡಿದೆ. ಆಡಳಿತಾವಧಿಯುದ್ದಕ್ಕೂ ಪ್ರತಿನಿತ್ಯವೂ ಒಂದಿಲ್ಲೊಂದು ಅಕ್ರಮ, ಅವ್ಯವಹಾರ, ಅನೈತಿಕ, ಭ್ರಷ್ಟಾಚಾರ ಇವುಗಳೇ ಸುದ್ದಿಯಾಗುತ್ತಾ ಕಾಲ ಕಳೆಯುತ್ತಿದೆಯೇ ವಿನಃ ರಾಜ್ಯದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ. ಇಂತಹ ಮಾನಗೆಟ್ಟ ಸರಕಾರದಿಂದ ಜನ ಏನನ್ನೂ ನಿರೀಕ್ಷಿಸುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಸಾಚಾ ರಾಜಕಾರಣಿಯಾಗಿರದೆ ವ್ಯಾಪಾರ-ವ್ಯವಹಾರ ಮಾಡಿಯೇ ರಾಜಕಾರಣಕ್ಕೆ ಬಂದಿರುವ ಬಂಟ್ವಾಳ ಶಾಸಕರು ಅಧಿಕಾರಕ್ಕೆ ಬಂದ ನಂತರ ತನ್ನ ವ್ಯಾಪಾರ ಬುದ್ದಿ ತೋರದೆ ಇರುತ್ತಾರೆಯೇ ಎಂದು ಪ್ರಶ್ನಿಸಿದರಲ್ಲದೆ, ಬಂಟ್ವಾಳ ಕ್ಷೇತ್ರದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಎಲ್ಲ ಅಕ್ರಮ ವ್ಯಾಪಾರ-ವ್ಯವಹಾರಗಳಲ್ಲಿ ಶಾಸಕರ ಪರಮಾಪ್ತರೇ ಭಾಗಿಗಳಾಗಿದ್ದಾರೆ. ಮರಳುಗಾರಿಕೆಗೆ ಪರವಾನಿಗೆ ಹೆಸರಿಗೆ ಮಾತ್ರ. ಆದರೆ ಮಾಡುತ್ತಿರುವುದೆಲ್ಲವೂ ಅಕ್ರಮವೇ. ನಾವು ಕಳೆದ 25 ವರ್ಷಗಳಿಂದ ಸಕ್ರಮವಾಗಿಯೇ ಮರಳುಗಾರಿಕೆ ನಡೆಸುತ್ತಾ ಬರುತ್ತಿರುವವರು. ನಾವು ಎಲ್ಲಿಯೂ ಪರವಾನಿಗೆಗೆ ವಿರುದ್ದವಾಗಿ ಮರಳುಗಾರಿಕೆ ನಡೆಸಿಲ್ಲ. ಯಾವುದೇ ಸರಕಾರದ ಅವಧಿಯಲ್ಲೂ ನಮ್ಮ ವ್ಯಾಪಾರ ನೇರ ಮಾರ್ಗದಲ್ಲೇ ನಡೆಯುತ್ತಿದೆ ಎಂದು ಸವಾಲೆಸೆದರು.
ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಬಿ ಎಂ ಅಬ್ಬಾಸ್ ಅಲಿ, ಜಯಂತಿ ಪೂಜಾರಿ, ವಾಸು ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ, ಆದಂ ಕುಂಞÂ, ಬಿ ಪದ್ಮನಾಭ ರೈ, ಬಾಲಕೃಷ್ಣ ಆಳ್ವ ಕೊಡಾಜೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment