ಬಂಟ್ವಾಳ, ಎಪ್ರಿಲ್ 04, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರಿನ ಕಾವಳಕಟ್ಟೆಯಲ್ಲಿ ಸುಮಾರು ಹತ್ತು ವರ್ಷ ಕಾಲ ನಿರಂತರವಾಗಿ ನಡೆದುಕೊಂಡು ಬಂದು ಮನೆಮಾತಾಗಿದ್ದ ‘ಮೂಡೂರು-ಪಡೂರು’ ಜೋಡುಕರೆ ಕಂಬಳ ಬಳಿಕ ಅನಿವಾರ್ಯ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತುಹೋಗಿತ್ತು. ಇದೀಗ ಮತ್ತೆ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಕಂಬಳ ಮುಂದುವರೆಸಲು ಕಾಲ ಕೂಡಿ ಬಂದಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ತಿಳಿಸಿದರು.
ಕೂಡಿಬೈಲು ಕಂಬಳ ಕರೆಯ ಗದ್ದೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವಳಕಟ್ಟೆಯಲ್ಲಿ ಮೂಡೂರು-ಪಡೂರು ಕಂಬಳ ನಿರಂತರ 10 ವರ್ಷಗಳ ಕಾಲ ಸಾಗಿಬಂದಿತ್ತು. ಬಳಿಕ ಕಾರಣಾಂತರಗಳಿಂದ ಹಾಗೂ ಸೂಕ್ತ ಸ್ಥಳದ ಕೊರತೆಯ ಕಾರಣದಿಂದ ಕಂಬಳ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕೂಡಿಬೈಲಿನಲ್ಲಿ ಕಂಬಳಕ್ಕೆ ಕಾಲ ಕೂಡಿ ಬಂದಿದ್ದು, ಅತ್ಯಂತ ತುರ್ತಾಗಿ ಯುದ್ದೋಪಾದಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಇದೇ ವರ್ಷದ ಕಂಬಳ ಸೀಸನಿನಲ್ಲಿ ಈ ಕಂಬಳವೂ ನಡೆಯಲಿದ್ದು, ದಿನಾಂಕ ಹಾಗೂ ಕಾರ್ಯಕ್ರಮದ ರೂಪುರೇಶೆಗಳು ಸದ್ಯದಲ್ಲೇ ಅಂತಿಮಗೊಳ್ಳಲಿದೆ ಎಂದವರು ತಿಳಿಸಿದರು.
ಕೂಡಿಬೈಲು ಕಂಬಳ ನಡೆಯುವ ಸ್ಥಳ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜನರ ಜಮೀನುಗಳ ಸಂಗಮ ಆಗಿದ್ದು, ಇಲ್ಲೂ ಸೌಹಾರ್ದತೆ ಎದ್ದು ಕಾಣಲಿದೆ. ಕಂಬಳ ಗದ್ದೆಯ ಆರಂಭದ ಜಾಗ ಹಿಂದೂ ವ್ಯಕ್ತಿಗೆ ಸೇರಿದ್ದರೆ, ಮಧ್ಯದ ಜಾಗ ಕ್ರಿಶ್ಚಿಯನ್ ವ್ಯಕ್ತಿಗೆ ಸೇರಿದೆ. ಕೊನೆಯ ಜಾಗ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿಗೆ ಸೇರಿದ ಜಾಗವಾಗಿದೆ. ಈ ನಿಟ್ಟಿನಲ್ಲಿ ಇಲ್ಲೂ ಕೂಡಾ ಸೌಹಾರ್ದತೆ ಕಂಡು ಬರಲಿದ್ದು, ನಾವೂರು ಕಂಬಳ ಬಂಟ್ವಾಳ ಕಂಬಳ ಎಂದು ಪ್ರಸಿದ್ದಿಯಾಗಲಿದೆ. ಕಾವಳಕಟ್ಟೆಯಲ್ಲಿ ಕಾವಳಪಡೂರು-ಕಾವಳಮೂಡೂರು ಗ್ರಾಮಕ್ಕೆ ಹೊಂದಿಕೊಂಡು ಮೂಡೂರು-ಪಡೂರು ಕಂಬಳ ಎಂಬ ಹೆಸರು ಬಂದಿದ್ದು, ಇಲ್ಲಿಯೂ ದೇವಸ್ಯಪಡೂರು-ದೇವಸ್ಯಮೂಡೂರು ಗ್ರಾಮಗಳಿದ್ದು, ಈ ಕಾರಣಕ್ಕಾಗಿ ಅದೇ ‘ಮೂಡೂರು-ಪಡೂರು’ ಹೆಸರು ಮುಂದುವರಿಯಲಿದೆ ಎಂದ ರೈ ರಾಜ್ಯ ಮಾಲಿನ್ಯ ಪರಿಸರ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರಿಗೆ ಈ ಬಾರಿಯ ಕಂಬಳದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿದೆ. ಕಾವಳಕಟ್ಟೆ ಕಂಬಳದ ಯಶಸ್ಸಿನ ರೂಪಾರಿ ಬಿ ಪದ್ಮಶೇಖರ ಜೈನ್ ಕೂಡಾ ಜೊತೆಗಿದ್ದು, ಎಲ್ಲ ಕಂಬಳ ಪ್ರೇಮಿಗಳು ಯಶಸ್ಸಿಗಾಗಿ ಕೈಜೋಡಿವಂತೆ ಕರೆ ನೀಡಿದರು.
ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ದೀರ್ಘವಾದ ಕರೆ ನಾವೂರದ್ದಾಗಿದ್ದು, 187 ಕೋಲು ಅಂದರೆ 146 ಮೀಟರ್ ಉದ್ದವಿದೆ ಎಂದ ಮಾಜಿ ಸಚಿವರು ಕಂಬಳದ ಸಿದ್ದತೆ ಭರದಿಂದ ಸಾಗುತ್ತಿದ್ದು, ರಸ್ತೆ ಅಗಲೀಕರಣ, ವಿದ್ಯುತ್ ಕಂಬಗಳ ಸ್ಥಳಾಂತರ ಮೊದಲಾದ ಕಾರ್ಯಗಳು ಶೀಘ್ರ ಮುಕ್ತಾಯಗೊಂಡು ಐತಿಹಾಸಿಕ ಕಂಬಳವಾಗಿ ಮೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ರಾಜ್ಯ ಮಾಲಿನ್ಯ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ನಾವೂರು ಗ್ರಾ ಪಂ ಅಧ್ಯಕ್ಷ ಉಮೇಶ್ ಕುಮಾರ್, ಸದಸ್ಯರಾದ ಫಾರೂಕ್, ಸುವರ್ಣ ಕುಮಾರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ, ಪ್ರಮುಖರಾದ ಮೆಲ್ವಿನ್ ಡಯಾಸ್, ಅವಿಲ್ ಮೆನೇಜಸ್, ವಿಜಯಾ, ವೆಂಕಪ್ಪ ಪೂಜಾರಿ, ಪುಷ್ಪರಾಜ್, ಸುಜಿತ್ ಜೈನ್, ಅಖಿಲ್ ಶೆಟ್ಟಿ, ರೂಪೇಶ್, ಪುರುಷೋತ್ತಮ, ಡೆಂಝಿಲ್ ನೊರೊನ್ಹಾ ಮೊದಲಾದವರು ಜೊತೆಗಿದ್ದರು.
0 comments:
Post a Comment