ಮಂಗಳೂರು, ಎಪ್ರಿಲ್ 06, 2022 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯ ಸಂಗ್ರಾಮಕ್ಕೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಕೆಚ್ಚೆದೆಯನ್ನು ಪ್ರದರ್ಶಿಸಿದ ಮೂಲ ವೀರಪುರುಷರು ನಮ್ಮ ತುಳುನಾಡಿನವರಾಗಿದ್ದು ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು, ಇಂದು ಎಷ್ಟೋ ಮಂದಿಗೆ ಈ ವಿಷಯವೇ ತಿಳಿದಿಲ್ಲ. ಈ ಬಗ್ಗೆ ತುಳುನಾಡಿನ ಜನತೆ ಕ್ರಾಂತಿ ವೀರರನ್ನು ಸ್ಮರಿಸಬೇಕು. ಮುಂದಿನ ದಿನದಲ್ಲಿ ಈ ಕ್ರಾಂತಿವೀರರನ್ನು ರಂಗಭೂಮಿಯ ಮೂಲಕ ಕನ್ನಡ, ತುಳು, ಹಿಂದಿ ಭಾಷೆಯಲ್ಲಿ ಪರಿಚಯಿಸಿ ಅವರ ಹೋರಾಟದ ಚಿತ್ರಣವನ್ನು ನೀಡುವ ಕಲ್ಪನೆ ತುಳು ಅಕಾಡೆಮಿಯ ಮುಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸಾರ್ ಹೇಳಿದರು.
ಮಂಗಳೂರು ಹೊರವಲಯದ ಬಿಕರ್ನಕಟ್ಟೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಜಂಟಿ ಸಂಯೋಜನೆಯಲ್ಲಿ ಪ್ರಥಮ ತುಳುನಾಡ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ವೀರರನ್ನು ಸ್ಮರಿಸುವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ತುಳುನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕ್ರಾಂತಿ ವೀರರ ವಂಶಸ್ಥರಾಗಿರುವ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ತಮ್ಮ ಪೂಜ್ಯರ ಹಾಗೂ ಅಂದಿನ ಹೋರಾಟದ ಬಗ್ಗೆ ಸ್ಮರಿಸಿಕೊಂಡರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಕಾವ್ಯ ನಟರಾಜ್ ಆಳ್ವಾ ಅವರು ತುಳುವ ನಾಡಿನ ಮಾತೃಶ್ರೀ ಅವರ ರಥವನ್ನು ಅನಾವರಣಗೊಳಿಸಿದರು. ರಥವು ಬಿಕರ್ನಕಟ್ಟೆಯಿಂದ ಮಂಗಳೂರಿನ ಬಾವುಟಗುಡ್ಡೆಯವರೆಗೆ ಮೆರವಣಿಗೆಯ ಮೂಲಕ ಸಾಗಿತು.
ಧ್ವಜಾರೋಹಣಗೈದು ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಈ ಕಾರ್ಯಕ್ರಮ ಉತ್ತಮ ಕಾರ್ಯಕ್ರಮ. ಮಂಗಳೂರಿನ ಠಾಗೂರ್ ಪಾರ್ಕಿನಲ್ಲಿ ತುಳುನಾಡಿನ ಕ್ರಾಂತಿಕಾರಿ ಹೋರಾಟಗಾರರಲ್ಲಿ ಓರ್ವರಾದ ಕೆದಂಬಾಡಿ ರಾಮೇಗೌಡರ ಕಂಚಿನ ಪುತ್ಥಳಿಯನ್ನು ನಿರ್ಮಿಸುವ ಯೋಜನೆಯನ್ನು ಈಗಾಗಲೇ ಸರಕಾರ ಹಮ್ಮಿಕೊಂಡಿದ್ದು ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಸರಕಾರ ನೀಡುವ ಗೌರವ ಎಂದರು.
ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಾಗೇಶ್ ಕುಲಾಲ್ ಕುಳಾಯಿ, ದಿನೇಶ್ ರೈ ಕಡಬ, ಮಲ್ಲಿಕಾ ಅಜಿತ್ ಕುಮಾರ್ ಶೆಟ್ಟಿ, ರಿಜಿಸ್ಟ್ರಾರ್ ಕವಿತಾ ಮೊದಲಾದವರು ಉಪಸ್ಥಿತರಿದ್ದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಸ್ವಾಗತಿಸಿ, ಪ್ರಸ್ತಾವನೆಗೈದರು, ಪ್ರಶಾಂತ್ ಭಟ್ ಕಡಬ ವಂದಿಸಿದರು, ಕಾರ್ಯಕ್ರಮದ ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment