ಮಂಗಳೂರು, ಎಪ್ರಿಲ್ 26, 2022 (ಕರಾವಳಿ ಟೈಮ್ಸ್) : ಮಸೀದಿಗಳಿಗೆ ಪವಿತ್ರ ರಂಝಾನ್ ಸಹಿತ ಇತರ ಸಮಯಗಳಲ್ಲಿ ಆರಾಧನೆಗೆ ಬರುವ ಭಕ್ತಾದಿಗಳನ್ನು ಆಡಳಿತ ಸಮಿತಿ ಎಂಬ ಅಹಂ ಕಾರಣದಿಂದ ಫ್ಯಾನ್ ಆಫ್ ಮಾಡುವ ಸಹಿತ ಇತರ ರೀತಿಯಲ್ಲಿ ತೊಂದರೆ ಕೊಡುವ ಮಂದಿಯ ವಿರುದ್ದ ಸುನ್ನಿ ಮುಸ್ಲಿಮರ ಆಧ್ಯಾತ್ಮಿಕ ನಾಯಕ, ಅಂತರಾಷ್ಟ್ರೀಯ ಖ್ಯಾತಿಯ ಭಾಷಣಗಾರ ಸಿಂಸಾರುಲ್ ಹಕ್ ಹುದವಿ ಅವರು ತೀಕ್ಷ್ಣವಾಗಿ ಛಾಟಿ ಬೀಸಿದ್ದು, ಅವರ ಭಾಷಣದ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಲವು ಮಸೀದಿಗಳಲ್ಲಿ ಹಲವು ಮಂದಿ ದಾನಿಗಳು ದಯಪಾಲಿಸಿದ ಹಣದಿಂದ ಹಾಗೂ ಮಸೀದಿ ವ್ಯಾಪ್ತಿಯ ಜಮಾಅತಿಗರು ನೀಡುವ ವಂತಿಗೆಯಿಂದ ಮಸೀದಿಗೆ ಆರಾಧೆನೆಗೆಂದು ಬರುವವರ ಅನುಕೂಲಕ್ಕಾಗಿ ಫ್ಯಾನ್ ಸಹಿತ ವಿವಿದ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ಆದರೆ ಕೆಲ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳೆನಿಸಿಕೊಂಡವರು ಕೆಲವೊಂದು ಕ್ಷುಲ್ಲಕ ನೆಪವೊಡ್ಡಿ ಹಾಗೂ ಒಂದು ರೀತಿಯ ಅಹಂ ಮನೋಭಾವದಿಂದ ಮಸೀದಿಗೆ ನಮಾಝಿಗೆ ಬರುವ ಭಕ್ತಾದಿಗಳಿಗೆ ಇಂತಹ ಸೌಲಭ್ಯಗಳನ್ನು ತಡೆಯುತ್ತಿರುವ ಸನ್ನಿವೇಶಗಳು ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಹುದವಿ ಅವರ ಭಾಷಣವನ್ನು ಸಮುದಾಯದ ಮಂದಿ ವ್ಯಾಪಕವಾಗಿ ವೈರಲ್ ಮಾಡುತ್ತಿರುವುದು ಕಂಡು ಬರುತ್ತಿದೆ.
ಮಸೀದಿಗಳಲ್ಲಿರುವ ಫ್ಯಾನ್‍ಗಳನ್ನು ಕಡು ಬೇಸಗೆಯಲ್ಲಿ ಕೂಡಾ ಆಡಳಿತ ಸಮಿತಿ ಪದಾಧಿಕಾರಿಗಳೆನಿಸಿಕೊಂಡವರು ಸ್ವಯಂ ದರ್ಪದಿಂದ ಭಕ್ತಾದಿಗಳ ಉಪಯೋಗದಿಂದ ತಡೆಯುತ್ತಿದ್ದು, ಇಂತಹ ಕೃತ್ಯಗಳ ವಿರುದ್ದ ಸಮುದಾಯದ ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಹುದವಿ ಅವರ ಭಾಷಣದ ತುಣುಕು ಪ್ರಚಾರ ಪಡೆಯುತ್ತಿದೆ. ಮಸೀದಿಯಲ್ಲಿ ವ್ಯವಸ್ಥೆಗೊಳಿಸಲಾಗಿರುವ ಸಕಲ ಸೌಲಭ್ಯಗಳೂ ಆರಾಧನೆಗೆಂದು ಬರುವ ಭಕ್ತಾದಿಗಳ ಅನುಕೂಲಕ್ಕಾಗಿಯೆ ಸಜ್ಜುಗೊಳಿಸಲಾಗಿದ್ದು, ಇದನ್ನು ತಡೆಯುವುದು ಅಲ್ಲಾಹನ ಮುಂದೆ ಎಸಗುವ ಘೋರ ಅಪರಾಧವಾಗಿದೆ ಎಂದು ಸಿಂಸಾರುಲ್ ಹಕ್ ಹುದವಿ ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಒಂದೆರಡು ಸಾವಿರ ರೂಪಾಯಿ ವಿದ್ಯುತ್ ಬಿಲ್ ಜಾಸ್ತಿ ಬರುತ್ತಿದೆ ಎಂಬ ಕಾರಣಕ್ಕೆ ಮಸೀದಿಗೆ ಬರುವ ಭಕ್ತಾದಿಗಳ ಆರಾಧನಾ ತಾಳ್ಮೆಯನ್ನು ಪರೀಕ್ಷಿಸುವುದು ಘೋರ ಅಪರಾಧ ಎಂದವರು ಅಹಂ-ದರ್ಪ ಪ್ರದರ್ಶಿಸುವ ಆಡಳಿತ ಸಮಿತಿ ಪದಾಧಿಕಾರಿಗಳಿಗೆ ಛಾಟಿ ಬೀಸಿದ್ದಾರೆ.
0 comments:
Post a Comment