ಎಪ್ರಿಲ್ 3 ರಿಂದ ರಂಝಾನ್ ಉಪವಾಸ ವೃತಾರಂಭ : ಗೊಂದಲಗಳಿಗೆ ಕ್ಷಣಮಾತ್ರದಲ್ಲಿ ತೆರೆ ಎಳೆದು ಸ್ಪಷ್ಟ ಸಂದೇಶ ಸಾರಿದ ಖಾಝಿಗಳು  - Karavali Times ಎಪ್ರಿಲ್ 3 ರಿಂದ ರಂಝಾನ್ ಉಪವಾಸ ವೃತಾರಂಭ : ಗೊಂದಲಗಳಿಗೆ ಕ್ಷಣಮಾತ್ರದಲ್ಲಿ ತೆರೆ ಎಳೆದು ಸ್ಪಷ್ಟ ಸಂದೇಶ ಸಾರಿದ ಖಾಝಿಗಳು  - Karavali Times

728x90

2 April 2022

ಎಪ್ರಿಲ್ 3 ರಿಂದ ರಂಝಾನ್ ಉಪವಾಸ ವೃತಾರಂಭ : ಗೊಂದಲಗಳಿಗೆ ಕ್ಷಣಮಾತ್ರದಲ್ಲಿ ತೆರೆ ಎಳೆದು ಸ್ಪಷ್ಟ ಸಂದೇಶ ಸಾರಿದ ಖಾಝಿಗಳು 

 ಮಂಗಳೂರು, ಎಪ್ರಿಲ್ 03, 2022 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳು ಸೇರಿದಂತೆ ಕೇರಳ-ಕರ್ನಾಟಕ ಉಭಯ ರಾಜ್ಯಗಳಲ್ಲೂ ಎಪ್ರಿಲ್ 3 ರ ಭಾನುವಾರದಂದು ರಂಝಾನ್ ಉಪವಾಸ ವೃತಾಚರಣೆ ಕೈಗೊಳ್ಳುವಂತೆ ಎಲ್ಲಾ ಖಾಝಿಗಳು ಆದೇಶ ನೀಡಿದ್ದಾರೆ. 

 ಶನಿವಾರ ಸಂಜೆ ಸೂರ್ಯಾಸ್ತದ ಬಳಿಕ ಚಂದ್ರದರ್ಶನಗೊಂಡಿರುವುದು ಖಚಿತಗೊಂಡ ಕಾರಣ ರಂಝಾನ್ ತಿಂಗಳು ಆರಂಭಗೊಂಡಿದೆ ಎಂಬ ತೀರ್ಮಾನಕ್ಕೆ ಖಾಝಿಗಳು ಬಂದಿದ್ದಾರೆ. 

 ಆರಂಭದಲ್ಲಿ ಖಾಝಿಗಳು ಸ್ಪಷ್ಟ ತೀರ್ಮಾನಕ್ಕೆ ಬರುವುದಕ್ಕಿಂತಲೂ ಮುಂಚಿತವಾಗಿ ಕೆಲವೊಂದು ವಾಟ್ಸಪ್ ಸಂದೇಶಗಳು ಕೆಲವೆಡೆ ಗೊಂದಲವನ್ನು ಸೃಷ್ಟಿಸಿದ ಪರಿಣಾಮ ಕರಾವಳಿ ಜಿಲ್ಲೆಗಳ ಮುಸ್ಲಿಮರು ಒಂದಷ್ಟು ಗೊಂದಲಕ್ಕೆ ಒಳಗಾದರಾದರೂ ರಾತ್ರಿ ಸುಮಾರು 9.30 ರ ವೇಳೆಗೆ ಎಲ್ಲಾ ಖಾಝಿಗಳೂ ಚಂದ್ರ ದರ್ಶನದ ಬಗ್ಗೆ ಖಚಿತಪಡಿಸಿಕೊಂಡು ಘೋಷಣೆ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು. 

 ಇಸ್ಲಾಮಿನ ವ್ಯವಸ್ಥೆಯಲ್ಲಿ ಖಾಝಿ ಹುದ್ದೆಗೆ ಮಹತ್ವದ ಸ್ಥಾನಮಾನಗಳನ್ನು ಕಲ್ಪಿಸಲಾಗಿದ್ದು, ಚಂದ್ರದರ್ಶನ ತೀರ್ಮಾನಕ್ಕೆ ಅದರದ್ದೇ ಆದ ಮಹತ್ತರ ಜವಾಬ್ದಾರಿಗಳಿವೆ. ಧಾರ್ಮಿಕ ವಿಧಿ ವಿಧಾನಗಳು ಕೆಲ ಸ್ವಯಂಘೋಷಿತ ಧರ್ಮ ರಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಿದಂತಲ್ಲ. ಅದು ಸೂಕ್ಷ್ಮ ಸನ್ನಿವೇಶವಾಗಿದ್ದು ಈ ಬಗ್ಗೆ ಸೂಕ್ಷ್ಮವಾಗಿ ಧಾರ್ಮಿಕ ವಿಧಿ ಪ್ರಕಾರ ಖಚಿತಪಡಿಸಿಕೊಂಡು ಅಂತಿಮ ತೀರ್ಮಾನಕ್ಕೆ ಬರಬೇಕೇ ವಿನಃ ಸ್ವಯಂಘೋಷಿತರ ಮೂಗಿನ ನೇರಕ್ಕೆ ವಿಧಿಸುವಂತದ್ದಲ್ಲ. ಕೆಲವೊಮ್ಮೆ ಖಾಝಿಗಳ ವಿಧಿ ತೀರ್ಮಾನಗಳಲ್ಲೂ ವ್ಯತ್ಯಾಸಗಳು ಬಂದರೂ ಅದನ್ನು ವಿಧಿಸುವ ಖಾಝಿಗಳ ಹಂತದಲ್ಲಿ ಅದು ಸರಿಯಾಗಿದ್ದು, ಆಯಾ ಖಾಝಿಗಳ ಅಂಗೀಕರಿಸುವ ಮಂದಿಗಳು ಅದನ್ನು ಅಂಗೀಕರಿಸಲೇಬೇಕಾಗಿದೆ. ಖಾಝಿಗಳು ವಿಧಿಸುವ ತೀರ್ಮಾನಕ್ಕೆ ಪಾರತ್ರಿಕ ಲೋಕದಲ್ಲಿ ಸರ್ವಶಕ್ತನ ನ್ಯಾಯ ಕಟಕಟೆಯಲ್ಲಿ ಅದಕ್ಕೆಲ್ಲಾ ಸಂಪೂರ್ಣ ಹೊಣೆಗಾರರು ಖಾಝಿಗಳೇ ಆಗಿರುತ್ತಾರೆ. 

ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಖಾಝಿಗಳು ವಿವೇಚನೆ ಬಳಸಿಕೊಂಡು ಸ್ಪಷ್ಟ ತೀರ್ಮಾನಕ್ಕೆ ಬರಲು ಒಂದಷ್ಟು ವಿಳಂಬ ಆದರೂ ಆ ಬಗ್ಗೆ ವಿನಾ ಕಾರಣ ಯಾವುದೇ ರೀತಿಯ ಧಾರ್ಮಿಕ ವಿಜ್ಞಾನದ ಗಂಧ ಗಾಳಿಯಿಲ್ಲದೆ ಯಾರೂ ವಿಮರ್ಶಿಸಲು ಹೋದರೆ ಅದಕ್ಕೆ ವಿಮರ್ಶಾಕಾರರೇ ಹೊಣೆಗಾರರಾಗುತ್ತಾರೆಯೇ ಹೊರತು ಆ ಬಗ್ಗೆ ಖಾಝಿಗಳು ಪ್ರತಿಕ್ರಯಿಸುತ್ತಾ ಹೋದರೆ ಧಾರ್ಮಿಕ ಅಜ್ಞಾನಿಗಳಿಗೆ ಅದು ಅರ್ಥ ಆಗಲಿಕ್ಕೂ ಸಾಧ್ಯವಿಲ್ಲ. ಈ ಬಗ್ಗೆ ಸಾಮಾನ್ಯರ ವಾಟ್ಸಪ್ ಸ್ಟೇಟಸ್ ನೋಡಿಕೊಂಡು ಅವರ ಮೂಗಿನ ನೇರಕ್ಕೆ ವಿಧಿಸಲು ಖಾಝಿಗಳಿಗೆ ಸಾಧ್ಯವಿಲ್ಲ ಎಂದು ಧಾರ್ಮಿಕ ಪಂಡಿತರು ಪ್ರತಿಕ್ರಯಿಸಿದ್ದಾರೆ. 

 ರಂಝಾನ್ ತಿಂಗಳಿನ ಚಂದ್ರದರ್ಶನದಂತಹ ಸೂಕ್ಷ್ಮ‌ಮತಿ ವಿಷಯಗಳಲ್ಲಿ ಸಾಮಾನ್ಯ ಜನ ಖಾಝಿಗಳ ತೀರ್ಮಾನಕ್ಕೆ ವಿನಾ ಕಾರಣ ವಿಮರ್ಶೆಗಳನ್ನು ನೀಡುವ ಬದಲು ರಂಝಾನಿನ ಮಹತ್ವವೇರಿದ ದಿನ, ಸಮಯ, ಕ್ಷಣಗಳ ಬಗ್ಗೆ ಜಾಗರೂಕರಾಗಿ ಗರಿಷ್ಠ ಸಮಯಗಳನ್ನು ಅಲ್ಲಾಹನ ಆರಾಧನಾ ಕರ್ಮಗಳಲ್ಲಿ ತೊಡಗಿಸಿಕೊಂಡು ಇಹ-ಪರ ವಿಜಯಕ್ಕಾಗಿ ಶ್ರಮಿಸುವುದರ ಜೊತೆಗೆ ನಾಡಿನ ಒಳಿತಿಗಾಗಿ ಈ ದೇಶದ ಸರ್ವ ಜನಾಂಗದ ಕ್ಷೇಮಕ್ಕಾಗಿ ದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಪ್ರಾರ್ಥಿಸುವ ಮೂಲಕ ಧನ್ಯಗೊಳಿಸುವಂತೆಯೂ, ಲೋಕಾಡಂಬರದ ಹಿಂದೆ ಓಡುವುದರಿಂದ ಬೆನ್ನು ಹಾಕಿ ಸರಳ ಹಾಗೂ ಮಾದರಿ ಜೀವನ ನಡೆಸುವ ಮೂಲಕ ಮಾದರಿ ಸಮುದಾಯದ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಖಾಝಿಗಳು ಇದೇ ವೇಳೆ ತಮ್ಮ ರಂಝಾನ್ ಸಂದೇಶದಲ್ಲಿ ಕರೆ ನೀಡಿದ್ದಾರೆ. ರಂಝಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಪೂರ್ತಿ ಒಂದು ತಿಂಗಳು ಅನಾವಶ್ಯಕ ಕೃತ್ಯಗಳಿಂದ ದೂರವಿದ್ದು, ಬೆಳಗ್ಗಿನ ಜಾವ ಸಹರಿ ಆಹಾರ ಸೇವಿಸಿದ ಬಳಿಕ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಖಾಲಿ ಹೊಟ್ಟೆಯಲ್ಲಿ ಉಪವಾಸ ವೃತಾಚರಣೆ ನಡೆಸಿ, ರಾತ್ರಿ-ಹಗಲಿನ ಬಹುತೇಕ ಸಮಯಗಳಲ್ಲಿ ಅಲ್ಲಾಹನ ಆರಾಧನಾ ಕರ್ಮಗಳಲ್ಲಿ ತಲ್ಲೀನರಾಗಿ‌ ಬಡ-ಬಗ್ಗರಿಗೆ ದಾನ-ಧರ್ಮಗಳನ್ನು ಮಾಡುತ್ತಾ ಧನ್ಯಗೊಳಿಸುತ್ತಾರೆ. ರಂಝಾನ್ ತಿಂಗಳ ಕೊನೆಯಲ್ಲಿ ಶವ್ವಾಳ್ ತಿಂಗಳ ಚಂದ್ರದರ್ಶನದೊಂದಿಗೆ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 3 ರಿಂದ ರಂಝಾನ್ ಉಪವಾಸ ವೃತಾರಂಭ : ಗೊಂದಲಗಳಿಗೆ ಕ್ಷಣಮಾತ್ರದಲ್ಲಿ ತೆರೆ ಎಳೆದು ಸ್ಪಷ್ಟ ಸಂದೇಶ ಸಾರಿದ ಖಾಝಿಗಳು  Rating: 5 Reviewed By: karavali Times
Scroll to Top