ಮಂಗಳೂರು, ಎಪ್ರಿಲ್ 13, 2022 (ಕರಾವಳಿ ಟೈಮ್ಸ್) : ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಪೊಳಲಿ ಜಾತ್ರೋತ್ಸವಕ್ಕೆ ಮಂಗಳವಾರ ರಾತ್ರಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ್ದು, ತಾಸುಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿ ಕ್ಷೇತ್ರಕ್ಕೆ ಆಗಮಿಸಿರುವ ಭಕ್ತರು ತೀವ್ರ ತೊಂದರೆ ಅನುಭವಿಸಿದ ಪರಿಣಾಮ ಸ್ವತಃ ವೀಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಸಿಎಂ ಆಗಮನದ ಹಿನ್ನಲೆಯಲ್ಲಿ ಕ್ಷೇತ್ರದ ದಾರಿಯ ಎರಡೂ ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ ಪರಿಣಾಮ ಕ್ಷೇತ್ರಕ್ಕೆ ಬಂದ ಭಕ್ತರು ಸುಮಾರು 2 ತಾಸುಗಳ ಕಾಲ ಟ್ರಾಫಿಕ್ ಜಾಂನಲ್ಲಿ ಬಾಕಿಯಾಗಿದ್ದಾರೆ. ಟ್ರಾಫಿಕಿನಲ್ಲಿ ಕಾದು ಕಾದು ಸುಸ್ತಾದ ಭಕ್ತರು ಸಿಎಂ ಆಗಮನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವತಃ ವೀಡಿಯೋ ಮಾಡಿಕೊಂಡ ಭಕ್ತರು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಇಂತಹ ಜಾತ್ರೆಗೆ ಈ ರಾತ್ರಿ ಸಮಯದಲ್ಲಿ ಸಿಎಂ ಬೊಮ್ಮಾಯಿ ಕರೆದವರಿಗೆ ಚಪ್ಪಲಿಯಲ್ಲಿ ಹೊಡೀಬೇಕು, ಸಿಎಂ ಬರುವುದಿದ್ದರೆ ಹಗಲಿನಲ್ಲಿ ಬಂದು ಹೋಗಬಹುದಿತ್ತಲ್ವ? ರಾತ್ರಿಯಲ್ಲಿ ಬಂದು ತಾಸುಗಟ್ಟಲೆ ಟ್ರಾಫಿಕ್ ಬಂದ್ ಮಾಡಿದ ಪರಿಣಾಮ ಸೇರಿದ್ದ ಲಕ್ಷಾಂತರ ಭಕ್ತರು ಮಳೆಯಲ್ಲಿ ನೆನೆದು ತೊಂದರೆ ಅನುಭವಿಸುವಂತಾಗಿದೆ. ಇಂತಹ ಕ್ಷೇತ್ರಕ್ಕೆ ಸಿಎಂ ಕರೆಸುವ ಅನಿವಾರ್ಯತೆ ಏನಿತ್ತು ಎಂಬಿತ್ಯಾದಿಯಾಗಿ ಭಕ್ತರು ತುಳು ಭಾಷೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಾತುಗಾರಿಕೆ ವೀಡಿಯೋದಲ್ಲಿ ಕಂಡು ಬರುತ್ತಿದೆ. ಇದೀಗ ಈ ಭಕ್ತರ ಆಕ್ರೋಶದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಮಂಗಳವಾರ ಜಿಲ್ಲಾ ಪ್ರವಾಸ ಕೈಗೊಂಡ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮಯ ಯಾಕೋ ಸರಿ ಇಲ್ಲದಂತಾಗಿತ್ತು. ಸಂಜೆ ವೇಳೆಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದ ಸಚಿವ ಈಶ್ವರಪ್ಪ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಸಿಎಂ ಆಗಮಿಸಿದ್ದ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದರು.
0 comments:
Post a Comment