2022 ಎಪ್ರಿಲ್ 1 ರಿಂದ ಆಧಾರ್ ಜೊತೆ ಪ್ಯಾನ್ ಜೋಡಣೆಗೆ 500 ದಂಡ
2022 ರ ಜುಲೈ 1 ರ ಬಳಿಕ ಪ್ಯಾನ್-ಆಧಾರ್ ಜೋಡಣೆಗೆ 1000 ದಂಡ
ನವದೆಹಲಿ, ಎಪ್ರಿಲ್ 01, 2022 (ಕರಾವಳಿ ಟೈಮ್ಸ್) : ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ದಂಡದೊಂದಿಗೆ ಕೇಂದ್ರ ಸರಕಾರ 2023 ರ ಮಾರ್ಚ್ 31ರವರೆಗೆ ವಿಸ್ತರಿಸಿದೆ. ಈ ಹಿಂದೆ 2022ರ ಮಾರ್ಚ್ 31 ಅಂತಿಮ ದಿನಾಂಕವಾಗಿತ್ತು. ಇದೀಗ ಅದನ್ನು ದಂಡ ಶುಲ್ಕ ಭರಿಸುವುದರೊಂದಿಗೆ ಲಿಂಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2023ರ ಮಾರ್ಚ್ 31ರ ವರೆಗೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವುದಿಲ್ಲ.
ಈ ಬಗ್ಗೆ ಮಾಹಿತಿ ನೀಡಿರೋ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತೆರಿಗೆದಾರರಿಗೆ ಎದುರಾಗುವ ಅನಾನುಕೂಲತೆಗಳನ್ನು ತಪ್ಪಿಸಲು ಇನ್ನೊಂದು ಅವಕಾಶ ನೀಡಲಾಗಿದ್ದು, ಪಾನ್ ಕಾರ್ಡ್-ಆಧಾರ್ ಜೋಡಣೆ ಗಡುವನ್ನು 2023ರ ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ. ಪಾನ್-ಆಧಾರ್ ಜೋಡಣೆ ಮಾಡಲು 2022 ಎಪ್ರಿಲ್ 1 ರಿಂದ ಮೂರು ತಿಂಗಳುಗಳ ಅವಧಿಯಲ್ಲಿ ತೆರಿಗೆದಾರರು 500 ರೂಪಾಯಿ ಶುಲ್ಕ ಪಾವತಿಸಬೇಕು. ಆ ಬಳಿಕದ ಅವಧಿಗೆ 1000 ರೂಪಾಯಿ ದಂಡ ಶುಲ್ಕ ಪಾವತಿಸಬೇಕು. ಆಧಾರ್ ಕಾರ್ಡಿಗೆ ಲಿಂಕ್ ಆಗದ ಪಾನ್ ಕಾರ್ಡ್ ಕಾಯ್ದೆ ಅನ್ವಯ ನಡೆಯೋ ಆದಾಯ ತೆರಿಗೆ ರಿರ್ಟನ್ ಸಲ್ಲಿಕೆ, ಮರುಪಾವತಿ ಪ್ರಕ್ರಿಯೆ ಮುಂತಾದವನ್ನು ಪೂರ್ಣಗೊಳಿಸಲು ಕ್ರಿಯಾಶೀಲವಾಗಿರುತ್ತದೆ ಎಂದು ತಿಳಿಸಿದೆ.
ಹೀಗಾಗಿ 2022ರ ಎಪ್ರಿಲ್ 1ರಿಂದ ಪಾನ್ ಕಾರ್ಡ್-ಆಧಾರ್ ಕಾರ್ಡಿಗೆ ಲಿಂಕ್ ಮಾಡಲು 500 ರೂಪಾಯಿ ಪಾವತಿಸಬೇಕಾಗಿದೆ. 2022ರ ಜುಲೈ 1ರ ಬಳಿಕ ಪಾನ್-ಆಧಾರ್ ಜೋಡಣೆ ಮಾಡಿದ್ರೆ 1000 ರೂಪಾಯಿ ಪಾವತಿಸಬೇಕಾಗುತ್ತದೆ. 2023ರ ಮಾರ್ಚ್ 31ರೊಳಗೆ ಲಿಂಕ್ ಮಾಡದೇ ಇದ್ದಲ್ಲಿ 2023ರ ಎಪ್ರಿಲ್ 1 ರಿಂದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಪಾನ್ ಕಾರ್ಡ್ ನಿಷ್ಕ್ರಿಯಗೊಂಡಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೂ ಪಾನ್ ಕಾರ್ಡ್ ಕಡ್ಡಾಯವಾಗಿದ್ದು, ಹೀಗಾಗಿ ಪಾನ್ ಕಾರ್ಡ್ ನಿಷ್ಕ್ರಿಯಗೊಂಡಲ್ಲಿ ಬ್ಯಾಂಕಿಂಗ್ ಸೇವೆಗಳಿಗೂ ಅನಾನುಕೂಲವಾಗಲಿದೆ.
2020ರಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಎಲ್ಲ ಪ್ಯಾನ್ ಕಾರ್ಡ್‍ಗಳನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಇದಕ್ಕೆ 2021ರ ಜೂನ್ 30ರವರಗೆ ಅಂತಿಮ ದಿನಾಂಕ ನಿಗದಿಪಡಿಸಿತ್ತು. ಬಳಿಕ ಅಂತಿಮ ಗಡುವನ್ನು 2021ರ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಮತ್ತೆ 2022ರ ಮಾರ್ಚ್ 31ಕ್ಕೆ ಅಂತಿಮ ದಿನಾಂಕ ನಿಗದಿಪಡಿಸಲಾಗಿತ್ತು.
ಆದಾಯ ತೆರಿಗೆ ಕಾನೂನಿನ ಪ್ರಕಾರ 2017ರ ಜುಲೈ 1 ರಿಂದ ಪ್ರತಿಯೊಬ್ಬ ವ್ಯಕ್ತಿ ಕೂಡಾ ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಪಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕೂಡ ಕಡ್ಡಾಯ ಮಾಡಲಾಗಿದೆ. ನಿಗದಿತ ದಿನಾಂಕದೊಳಗೆ ಆಧಾರ್ ಜೊತೆ ಲಿಂಕ್ ಆಗದ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸುವುದಾಗಿಯೂ ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಮಾಹಿತಿ ನೀಡಿತ್ತು.
0 comments:
Post a Comment