ಕಂಬಳ ಕ್ರೀಡೆಗೆ ಕಂಬಳೋತ್ಸವದ ಸ್ಪರ್ಶ ನೀಡಿದ ಕೀರ್ತಿ ರೈ ಅವರಿಗೆ ಸಲ್ಲಬೇಕು : ಪಿಯೂಸ್
ಬಂಟ್ವಾಳ ಕಂಬಳದ ಸಾಮರಸ್ಯ ನಾಡಿನೆಲ್ಲೆಡೆ ಹರಡಲಿ : ಶ್ರೀ ವಿಖ್ಯಾತಾನಂದ ಸ್ವಾಮೀಜಿ
ಬಂಟ್ವಾಳ, ಎಪ್ರಿಲ್ 18, 2022 (ಕರಾವಳಿ ಟೈಮ್ಸ್) : ತುಳುನಾಡಿನ ಜನಪ್ರತಿಯ ಕ್ರೀಡೆಯಾಗಿರುವ ಕಂಬಳವನ್ನು ಕಂಬಳೋತ್ಸವವಾಗಿ ಆಯೋಜಿಸಿ ಜನಮನ ಸೆಳೆದ ಖ್ಯಾತಿ ಇದ್ದರೆ ಅದು ಮಾಜಿ ಸಚಿವ ಬಿ ರಮಾನಾಥ ರೈ ಅವರಿಗೆ ಸಲ್ಲಬೇಕು ಎಂದು ಮೂಡೂರು-ಪಡೂರು ಬಂಟ್ವಾಳ ಕಂಬೋತ್ಸವ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಹೇಳಿದರು.
ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮುಂದಾಳುತ್ವದಲ್ಲಿ ಭಾನುವಾರ (ಎ 17) ಪುನರಾರಂಭಗೊಂಡ 11ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳೋತ್ಸವದಲ್ಲಿ ಭಾಗವಹಿಸಿದ ಗಣ್ಯಾತಿಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿದ ಅವರು, ಕಾವಳಕಟ್ಟೆಯ ಎನ್ ಸಿ ರೋಡಿನಲ್ಲಿ ಸತತ 10 ವರ್ಷಗಳ ಕಾಲ ಬಹಳ ವಿಜೃಂಭಣೆಯಿಂದ ನಡೆದ ಮೂಡೂರು-ಪಡೂರು ಕಂಬಳ ಕೆಲ ವರ್ಷಗಳ ಕಾಲ ಕಾರಣಾಂತರದಿಂದ ನಿಂತು ಹೋಗಿದ್ದು, ಬಳಿಕ ಇದೀಗ ನಾವೂರು-ಕೂಡಿಬೈಲಿನ ಸೌಹಾರ್ದತೆಯ ಗದ್ದೆಯಲ್ಲಿ ಮತ್ತೆ ವಿಶೇಷ ರೀತಿಯಲ್ಲಿ ಭಗವಂತನ ಕೃಪಕಾಟಕ್ಷತೆಯಿಂದ ಅತ್ಯಂತ ಕನಿಷ್ಠ ಅವಧಿಯಲ್ಲಿ ಅಂದರೆ ಕೇವಲ 24 ದಿನಗಳೊಳಗೆ ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಉದ್ದದ ಕಂಬಳ ಕರೆಯನ್ನು ನಿರ್ಮಿಸಿ ಐತಿಹಾಸಿಕ ಕಂಬಳವಾಗಿ ಆಯೋಜಿಸುವಲ್ಲಿ ರಮಾನಾಥ ರೈಗಳು ಯಶಸ್ವಿಯಾಗಿದ್ದಾರೆ. ಇದರ ಹಿಂದೆ ಈ ಜಿಲ್ಲೆಯ ಸರ್ವ ವರ್ಗದ ಜನರ ಪ್ರೀತಿ-ಬೆಂಬಲ ಕೆಲಸ ಮಾಡಿದೆ ಎಂದರು.
ಕಂಬಳೋತ್ಸವದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಕಂಬಳ ಕೂಟಕ್ಕೆ ವಿಶೇಷ ಅಧುನಿಕ ಸ್ಪರ್ಶ ನೀಡಿ ಸರ್ವ ಜನಾಂಗದ ಒಟ್ಟು ಸೇರುವಿಕೆಯಲ್ಲಿ ಹಾಗೂ ಕಂಬಳ ಗದ್ದೆಯಲ್ಲೂ ಸೌಹಾರ್ದತೆಯ ಸಾರವನ್ನು ಪಸರಿಸಿದ ಕೀರ್ತಿ ಮಾಜಿ ಸಚಿವ ಬಿ ರಮಾನಾಥ ರೈ ಅವರಿಗೆ ಸಲ್ಲಬೇಕು ಎಂದು ಕೊಂಡಾಡಿದರು.
ಕಂಬಳೋತ್ಸವದ ಯಶಸ್ಸಿಗೆ ಕೈ ಜೋಡಿಸಿದ ಈ ನಾಡಿನ ಸರ್ವ ವರ್ಗದ ಜನರ ಬೆಂಬಲ ಈ ಬಾರಿ ಅವರನ್ನು ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸುವವರೆಗೂ ಮುಂದುವರಿಯುವ ಮೂಲಕ ಮುಂದಿನ ಬಾರಿ ಕರ್ನಾಟಕ ಘನ ಸರಕಾರದ ಅತ್ಯುನ್ನತ ಮಟ್ಟದ ಸಚಿವರಾಗಿ ಈ ಕಂಬಳೋತ್ಸವ ಮುಂದುವರಿಸುವ ಭಾಗ್ಯ ಅವರ ಪಾಲಿಗೆ ಒದಗಿ ಬರಬೇಕು ಎಂದು ಆಶಿಸಿದರು.
ಕಂಬಳ ಕೂಟ ಉದ್ಘಾಟಿಸಿದ ಸೊಲೂರು ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನಗೈದು, ತುಳುನಾಡಿನ ಕಂಬಳ ಕೂಟ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾವೈಕ್ಯತೆಯ ದ್ಯೋತಕ ಎಂದರಲ್ಲದೆ ಬಂಟ್ವಾಳ ಕಂಬಳ ಸಾಮರಸ್ಯದ ಸಂದೇಶವನ್ನು ಎಲ್ಲೆಡೆಯಲ್ಲೂ ಪಸರಿಸಲಿ ಎಂದರು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಪರಸ್ಪರ ಅಶಾಂತಿ, ಅಸಮಾಧಾನ ಮೇಳೈಸುವ ಈ ಕಾಲಘಟ್ಟದಲ್ಲಿ ಐಕ್ಯತೆ ಹಾಗೂ ಭಾವೈಕ್ಯತೆಗೆ ಈ ಕಂಬಳದ ಮೂಲಕ ಪ್ರೇರಣೆ ಸಿಗಲಿ ಎಂದರು.
ಕಂಬಳೋತ್ಸವದ ಅಧ್ಯಕ್ಷತೆ ವಹಿಸಿದ್ದ ಕಂಬಳ ಸಮಿತಿಯ ಗೌರವಾಧ್ಯಕ್ಷ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಸಾಮರಸ್ಯದ ಪ್ರತೀಕವಾಗಿ ನಾವೂರಿನಲ್ಲಿ ಕಂಬಳ ಆಯೋಜನೆ ಮಾಡಲಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ಕಂಬಳದ ಕರೆ ನಿರ್ಮಿಸಿ, ಹೃಸ್ವ ಅವಧಿಯಲ್ಲಿ ಆಯೋಜನೆಯಾಗಿರುವ ಈ ಕಂಬಳ ಕೂಟ ಇದೀಗ ಯಶಸ್ವಿಯಾಗಿರುವುದು ಭಗವಂತನ ಕೃಪೆಯಿಂದ ಮಾತ್ರ ಸಾಧ್ಯ ಎಂದು ದೇವರಿಗೆ ಕೃತಜ್ಞತೆ ಅರ್ಪಿಸಿದರು.
ಅಲ್ಲಿಪಾದೆ ಸಂತ ಅಂತೊನಿ ಚರ್ಚ್ ಧರ್ಮಗುರು ಫೆಡ್ರಿಕ್ ಮೊಂತೆರೊ, ಮಾಜಿ ಶಾಸಕ ಜೆ ಆರ್ ಲೋಬೋ, ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಪತ್ರಿಕಾ ಸಂಪಾದಕ ವಾಲ್ಟರ್ ನಂದಳಿಕೆ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ವಿಶ್ರಾಂತ ತಹಶೀಲ್ದಾರ್ ಮೋಹನ್ ರಾವ್, ನಾವೂರು ಗ್ರಾ ಪಂ ಅಧ್ಯಕ್ಷ ಉಮೇಶ್ ಕುಲಾಲ್, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೋರಸ್, ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಬಿ ಎಚ್ ಖಾದರ್ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಶ್ರೀಬುಳ್ಳಾಳ್ತಿ ಚಾವಡಿಯ ಮನೋಜ್ ರೈ, ಪ್ರಮುಖರಾದ ಸಚಿನ್ ರೈ ಮಾಣಿಗುತ್ತು, ಜಗನ್ನಾಥ ಚೌಟ, ನರೇಂದ್ರ ರೈ, ಸುದರ್ಶನ್ ಜೈನ್, ಪದ್ಮನಾಭ ರೈ, ಗುಣಪಾಲ ಕಡಂಬ, ಕಂಬಳ ಸಮಿತಿ ಸಂಚಾಲಕ ಪದ್ಮಶೇಖರ್ ಜೈನ್, ಕಾಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಅವಿಲ್ ಮಿನೇಜಸ್, ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಕಂಬಳೋತ್ಸವ ಯಶಸ್ಸಿವ ರೂವಾರಿಗಳಾದ ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ ಮೊದಲಾವರು ಭಾಗವಹಿಸಿದ್ದರು.
ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹಾಗೂ ರಾಜೀವ್ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment