ಬಂಟ್ವಾಳ, ಎಪ್ರಿಲ್ 30, 2022 (ಕರಾವಳಿ ಟೈಮ್ಸ್) : ಬಿ ಸಿ ರೋಡು ಮಿನಿ ವಿಧಾನಸೌಧ ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆ ಕೈಕೊಟ್ಟು ತಿಂಗಳು ಕಳೆದರೂ ಇನ್ನೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿಲ್ಲ. ಕಳೆದ ಒಂದು ತಿಂಗಳಿನಿಂದ ಇಲ್ಲಿನ ಲಿಫ್ಟ್ ವ್ಯವಸ್ಥೆ ಹಾಳಾಗಿದ್ದು ಸಾರ್ವಜನಿಕರು ತೀವ್ರ ಅನಾನುಕೂಲ ಎದುರಿಸುವಂತಾಗಿದೆ.
ಕಟ್ಟಡದಲ್ಲಿ ವಿವಿಧ ನಾಗರಿಕ ಸೌಲಭ್ಯ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, 1ನೇ ಹಾಗೂ 2ನೇ ಮಹಡಿಯ ಕಚೇರಿಗಳಿಗೆ ತೆರಳಲು ಸಾರ್ವಜನಿಕರು ಈ ಲಿಫ್ಟ್ ಬಳಸಿಕೊಳ್ಳುತ್ತಿದ್ದರು. ಪ್ರಾಯಸ್ಥರು, ಅಶಕ್ತರು, ರೋಗಿಗಳು ಕಟ್ಟಡ ಮೇಲಿನ ಮಹಡಿಗಳಿಗೆ ನಡೆದುಕೊಂಡು ಹೋಗಲು ಸಾಧ್ಯವಾಗದೆ ಲಿಫ್ಟ್ ಬಳಸಿ ಸಂಚರಿಸುತ್ತಿದ್ದರು. ಆದರೆ ಇದೀಗ ಇಲ್ಲಿನ ಲಿಫ್ಟ್ ಕೈಕೊಟ್ಟ ಪರಿಣಾಮ ಪ್ರಾಯಸ್ಥರು, ಅಶಕ್ತರು ನಡೆದುಕೊಂಡು ಮೆಟ್ಟಿಲು ಹತ್ತಿಕೊಂಡೇ ಮಹಡಿಗಳತ್ತ ತೆರಳಬೇಕಾಗಿದೆ. ತೀವ್ರ ಅನಾನುಕೂಲ ಆದರೂ ಅನಿವಾರ್ಯವಾಗಿ ತೆರಳಲೇಬೇಕಾದ ಪರಿಸ್ಥಿತಿ. ಇನ್ನೊಬ್ಬರ ಸಹಾಯ ಪಡೆದು, ಇತರರು ಕೈ ಹಿಡಿದು ಪ್ರಾಯಸ್ಥರನ್ನು ಮಿನಿ ವಿಧಾನಸೌಧದ ಮೆಟ್ಟಿಲು ಹತ್ತಿಸುತ್ತಿರುವ ದೃಶ್ಯ ಇದೀಗ ನಿತ್ಯವೂ ಕಂಡು ಬರುತ್ತಿದೆ.
ಆದರೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಕಣ್ಣಿದ್ದೂ ಕುರುಡುತನ ಪ್ರದರ್ಶಿಸುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
0 comments:
Post a Comment