ಬಂಟ್ವಾಳ, ಎಪ್ರಿಲ್ 05, 2022 (ಕರಾವಳಿ ಟೈಮ್ಸ್) : ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುದ್ರಿಯಾದಲ್ಲಿ ಸೋಮವಾರ ರಾತ್ರಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆ ಬಾಳುವ ಸಾಮಾಗ್ರಿ ಸಹಿತ ಮೂರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಪೊಲೀಸರು ಈ ದಾಳಿ ನಡೆಸಿದ್ದು, ಆರೋಪಿಗಳಾದ ಕರುಣಾಕರ, ಅವಿನಾಶ್ ಹಾಗೂ ಶರತ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಕ್ನೋ ಹಾಗೂ ಹೈದರಾಬಾದ್ ತಂಡಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿದಂತೆ ಆರೋಪಿಗಳು ಈ ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 10 ಸಾವಿರ ರೂಪಾಯಿ ಮೌಲ್ಯದ ಲೆನೊವೊ ಕಂಪೆನಿಯ ಲ್ಯಾಪ್ ಟಾಪ್, 2 ಸಾವಿರ ಮುಖ ಬೆಲೆಯ 6 ನೋಟುಗಳು, 500 ಮುಖ ಬೆಲೆಯ 5 ನೋಟುಗಳ ಒಟ್ಟು 14,500/- ರೂಪಾಯಿ ನಗದು ಹಣ, 1500 ರೂಪಾಯಿ ಮೌಲ್ಯದ ಲಾವಾ ಕಂಪೆನಿಯ 3 ಕೀಪ್ಯಾಡ್ ಮೊಬೈಲ್, 9 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ ಸಂಗ್ ಕಂಪೆನಿಯ 3 ಮೊಬೈಲ್, 500 ರೂಪಾಯಿ ಮೌಲ್ಯದ ನೋಕಿಯಾ ಕಂಪೆನಿಯ ಕೀಪ್ಯಾಡ್ ಮೊಬೈಲ್, 500 ರೂಪಾಯಿ ಮೌಲ್ಯದ ಜಿಯೋ ಕಂಪೆನಿಯ ಕೀಪ್ಯಾಡ್ ಮೊಬೈಲ್, 5 ಸಾವಿರ ರೂಪಾಯಿ ಮೌಲ್ಯದ ಆಪಲ್ ಕಂಪೆನಿಯ ಮೊಬೈಲ್, 6 ಸಾವಿರ ರೂಪಾಯಿ ಮೌಲ್ಯದ ರೆಡ್ ಮಿ ಕಂಪೆನಿಯ 2 ಮೊಬೈಲ್ ಸಹಿತ ಒಟ್ಟು 47 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2022 ಕಲಂ 78(3) ಕೆಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment