ಮಂಗಳೂರು, ಎಪ್ರಿಲ್ 08, 2022 (ಕರಾವಳಿ ಟೈಮ್ಸ್) : ನಗರದ ಹೃದಯಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಬಸ್-ಬೈಕ್ ನಡುವೆ ಅಪಘಾತ ಸಂಭವಿಸಿದ ಬಳಿಕ ಹಠಾತ್ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಗೆಗೆ ಎರಡೂ ವಾಹಗಳು ಹೊತ್ತಿ ಉರಿದಿದೆ.
ಹಂಪನಕಟ್ಟೆ ವೆನ್‍ಲಾಕ್ ಆಸ್ಪತ್ರೆಯ ಮುಂಭಾಗ ಈ ಅವಘಡ ಸಂಭವಿಸಿದೆ. ಸಿಟಿ ಬಸ್ಸಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಅಪಘಾತದ ಬಳಿಕ ಬೈಕಿನ ಇಂಧನ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅವಘಡ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ ಬಸ್ಸಿನ ಮುಂಭಾಗ ಸಂಪೂರ್ರ್ಣ ಸುಟ್ಟು ಕರಕಲಾಗಿದೆ. ಬೈಕ್ ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿದೆ.
ಬಸ್ಸಿಗೆ ಬೆಂಕಿ ಹತ್ತಿದ ತಕ್ಷಣ ಬಸ್ಸು ಚಾಲಕ ಹಾಗೂ ನಿರ್ವಾಹಕರು ಬಸ್ಸಿನಿಂದ ಕೆಳಗಿಳಿದು ಪ್ರಯಾಣಿಕರನ್ನೂ ಕೂಡಾ ಕೆಳಗಿಳಿಯುವಂತೆ ಸೂಚಿಸಿದ ಪರಿಣಾಮ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
0 comments:
Post a Comment