ಬಂಟ್ವಾಳ, ಎಪ್ರಿಲ್ 10, 2022 (ಕರಾವಳಿ ಟೈಮ್ಸ್) : ದೇಶಕ್ಕಾಗಿ ಸಾಧನೆಗೈದ ಹಾಗೂ ಜನಪರ ಕೆಲಸಗಳ ಪಟ್ಟಿ ಹಿಡಿದು ಜನರ ಬಳಿ ತೆರಳಿ ಮತ ಯಾಚಿಸುವ ಏಕೈಕ ಪಕ್ಷ ಈ ದೇಶದಲ್ಲಿದ್ದರೆ ಅದು ಕಾಂಗ್ರೆಸ್ ಮಾತ್ರವಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಇಂಧನ, ವಿದ್ಯುತ್ ಹಾಗೂ ದೈನಂದಿನ ಸಾಮಾಗ್ರಿಗಳ ಬೆಲೆ ಏರಿಕೆ ವಿರುದ್ದ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬಿ ಸಿ ರೋಡು ಜಂಕ್ಷನ್ನಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ಎಂಬುದು ಕೇವಲ ಓಟಿಗಾಗಿ ಇರುವ ಪಕ್ಷವಾಗಿದೆ. ದೇಶಕ್ಕಾಗಿ ಯಾವುದೇ ಸಾಧನೆಯೂ ಇಲ್ಲ, ದೇಶದ ಬಡ ಜನರಿಗಾಗಿ ಯಾವುದೇ ಸೇವೆಯೂ ಇಲ್ಲ. ಆಪರೇಶನ್ ಮೂಲಕ ಹಣಬಲ, ತೋಳ್ಬಲದಿಂದ ಮಾತ್ರ ವಾಮಮಾರ್ಗದಿಂದ ಅಧಿಕಾರ ಪಡೆದು ಜನರನ್ನು ಕೊಳ್ಳೆ ಹೊಡೆಯುವ ಕಾರ್ಯ ಬಿಜೆಪಿ ಸರಕಾರದಿಂದ ಆಗುತ್ತಿದೆ ಎಂದು ಝಾಡಿಸಿದರು.
ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ಮನಸ್ಸನ್ನು ಒಡೆದು ವೋಟು ಗಿಟ್ಟಿಸುವ ಈ ಹಿಂದಿನ ಚಾಳಿಯನ್ನು ಈಗಲೂ ಬಿಜೆಪಿಗರು ಮಾಡುತ್ತಿದ್ದು, ಇದೀಗ ಜನ ಪ್ರಬುದ್ಧರಾಗಿದ್ದಾರೆ. ಬ್ರಿಟಿಷರಂತೆ ಇವರು ಒಡೆದು ಆಳುವ ನೀತಿಯನ್ನು ಬಳಸಿಕೊಂಡು ರಾಜಕೀಯ ಅಧಿಕಾರದ ಲಾಭವನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಇಂದಿನ ಪ್ರಬುದ್ದ ಜನ ಸಂಪೂರ್ಣವಾಗಿ ಅರಿತುಕೊಂಡಿದ್ದಾರೆ ಎಂದ ರೈ ಕಾಂಗ್ರೆಸ್ ಪಕ್ಷ ಈ ದೇಶದ ಇತಿಹಾಸವಾಗಿದ್ದು, ಇದು ಎಲ್ಲ ವರ್ಗದ ಜನರಿಗೂ ಚೆನ್ನಾಗಿ ಗೊತ್ತಿದೆ. ಅಧಿಕಾರಕ್ಕಾಗಿ ಯಾವುದೇ ವಾಮಮಾರ್ಗವನ್ನೂ ಅನುಸರಿಸಲು ಕಾಂಗ್ರೆಸ್ ಯಾವತ್ತೂ ಸಿದ್ದವಿಲ್ಲ. ಕಾಂಗ್ರೆಸ್ ಪಕ್ಷದ ಸಾಧನೆ, ಅಭಿವೃದ್ದಿ ಹಾಗೂ ಜನಸೇವೆಯನ್ನು ಮನಸಾರೆ ಮೆಚ್ಚಿಕೊಂಡು ಮಾತ್ರ ಜನ ಈ ಹಿಂದೆಯೂ ಕಾಂಗ್ರೆಸ್ಸಿಗೆ ಅಧಿಕಾರ ನೀಡಿದ್ದಾರೆ. ಇನ್ನು ಮುಂದಕ್ಕೂ ಕೂಡಾ ಜನ ಅಭಿವೃದ್ದಿ, ಜನಸೇವೆ ಹಾಗೂ ಸಮಾಜದಲ್ಲಿ ನೆಮ್ಮದಿಯ ವಾತಾವರಣಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ್ ಪೂಜಾರಿ ಜೋರಾ ಹಾಗೂ ಇಬ್ರಾಹಿಂ ನವಾಝ್ ಬಡಕಬೈಲು, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್, ಯೂಸುಫ್ ಕರಂದಾಡಿ, ಲೋಕೇಶ್ ಸುವರ್ಣ, ಸುಭಾಶ್ಚಂದ್ರ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಜೆಸಿಂತಾ ಡಿಸೋಜ, ವೆಂಕಪ್ಪ ಪೂಜಾರಿ, ಮುಹಮ್ಮದ್ ಶಫಿ, ಗಂಗಾಧರ ಪೂಜಾರಿ, ಪದ್ಮನಾಭ ರೈ, ಲವೀನಾ ವಿಲ್ಮ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment