ಧರ್ಮಸ್ಥಳ, ಮಾರ್ಚ್ 28, 2022 (ಕರಾವಳಿ ಟೈಮ್ಸ್) : ಇಲ್ಲಿನ ಠಾಣಾ ವ್ಯಾಪ್ತಿಯ ನೇತ್ರಾವತಿ ಸ್ನಾನಘಟ್ಟದ ಬಳಿ ಶ್ರೀ ಕ್ಷೇತ್ರಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಕುಂದಾಪುರ ಮೂಲದ ಶ್ರೀಧರ ನಾಯರಿ ಎಂಬವರು ಸ್ನಾನದ ಸಮಯ ಬ್ಯಾಗಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಬಗ್ಗೆ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಪೊಲೀಸರು ಆರೋಪಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕು ಪಾರೆ ಗ್ರಾಮದ ಇಂದಿರಾನಗರ ನಿವಾಸಿ ನಂದಲಾಲ್ ಚೌವಾಣ್ ಎಂಬವರ ಪುತ್ರ ಮಿತುನ್ ಚೌವಾಣ್ (31) ಎಂಬಾತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ ಪೊಲೀಸರು 80 ಸಾವಿರ ರೂಪಾಯಿ ಮೌಲ್ಯದ 37 ಗ್ರಾಂ ತೂಕದ ಚಿನ್ನದ ಮಾಲೆ, 32 ಸಾವಿರ ರೂಪಾಯಿ ಮೌಲ್ಯದ 8.04 ಗ್ರಾಂ ತೂಕದ ಚಿನ್ನದ ಲಕ್ಷ್ಮಿ ಮಾಲೆ, 65 ಸಾವಿರ ರೂಪಾಯಿ ಮೌಲ್ಯದ 16.230 ಗ್ರಾಂ ತೂಕದ ಚಿನ್ನದ ಸರ, 40 ಸಾವಿರ ರೂಪಾಯಿ ಮೌಲ್ಯದ 10.2 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್, 14.5 ಸಾವಿರ ರೂಪಾಯಿ ಮೌಲ್ಯದ ಮತ್ತೊಂದು ಚಿನ್ನದ ಬ್ರಾಸ್ ಲೈಟ್, 8.5 ಸಾವಿರ ರೂಪಾಯಿ ಮೌಲ್ಯದ 2.190 ಗ್ರಾಂ ತೂಕದ ಚಿನ್ನದ ಉಂಗುರ ಸಹಿತ ಒಟ್ಟು 2.4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ದೇಶದ ವಿವಿಧ ಪ್ರಸಿದ್ದ ಯಾತ್ರ ಸ್ಥಳಗಳಿಂದ ಕಳ್ಳತನ ಮಾಡುವ ಅಭ್ಯಾಸದವನಾಗಿದ್ದು, ಈತನ ವಿರುದ್ದ ಮಹಾರಾಷ್ಟ್ರ ರಾಜ್ಯದ ಪುಣೆ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೊನಾವಣೆ ಮತ್ತು ಅಡಿಷನಲ್ ಎಸ್ಪಿ ಕುಮಾರ ಚಂದ್ರ ಅವರುಗಳ ಮಾರ್ಗದರ್ಶನ, ಬಂಟ್ವಾಳ ಡಿವೈಎಸ್ಪಿ ಪ್ರತಾಪ ಸಿಂಗ್ ಥೂರಟ್ ಹಾಗೂ ಬೆಳ್ತಂಗಡಿ ಸರ್ಕಲ್ ಇನ್ಸ್‍ಪೆಕ್ಟರ್ ಶಿವಕುಮಾರ್ ಅವರ ನೇತೃತ್ವದಲ್ಲಿ ಧರ್ಮಸ್ಥಳ ಪಿಎಸ್ಸೈ ಕೃಷ್ಣಕಾಂತ್ ಪಾಟೀಲ್ ಅವರ ವಿಶೇಷ ತಂಡದ ಸದಸ್ಯರುಗಳಾದ ಎಚ್.ಸಿ.ಗಳಾದ ಬೆನ್ನಿಚ್ಚನ್, ಪ್ರಶಾಂತ್, ರಾಹುಲ್, ವಿಜು, ರವೀಂದ್ರ, ಕೃಷ್ಣಪ್ಪ, ಪಿಸಿ ಸತೀಶ್ ನಾಯ್ಕ, ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್, ದಿವಾಕರ್ ಅವರು ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಎಸ್ಪಿ ಅವರು ಬಹುಮಾನ ಘೋಷಿಸಿರುತ್ತಾರೆ.
0 comments:
Post a Comment