ಪುತ್ತೂರು, ಮಾರ್ಚ್ 24, 2022 (ಕರಾವಳಿ ಟೈಮ್ಸ್) : ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ನಿವಾಸಿ ದಾಮೋದರ ಡಿ ಎಂಬವರ ಪುತ್ರ ಚಂದ್ರಹಾಸ ಎಂ ಅವರಿಗೆ ಮೊಬೈಲ್ ಮೂಲಕ ಅಪರಿಚಿತ ದುಷ್ಕರ್ಮಿಗಳು ಮಾ 12 ರಂದು ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ನ್ಯಾಯಾಲಯದ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಇದೀಗ ಮಾರ್ಚ್ 23 ರಂದು ಪ್ರಕರಣ ದಾಖಲಾಗಿದೆ.
ಚಂದ್ರಹಾಸ ಅವರಿಗೆ ಮಾ 12 ರಂದು ಮಧ್ಯಾಹ್ನ 1.59 ರ ವೇಳೆಗೆ 9916242169 ಹಾಗೂ 8045193033ನೇ ಮೊಬೈಲ್ ಸಂಖ್ಯೆಯಿಂದ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತುಳು ಮತ್ತು ಕನ್ನಡದಲ್ಲಿ ಮಾತನಾಡುತ್ತಾ ಶರತ್ ಮಡಿವಾಳನ ಹೆಣ ಹೇಗೆ ಬಿದ್ದಿದೆ ಅದೇ ರೀತಿ ನಿನ್ನ ಹೆಣ ನಾಳೆ ಸಂಜೆಯೊಳಗೆ ಬೀಳುತ್ತದೆ ಎಂದು ತನಗೆ ಮತ್ತು ತನ್ನ ಮನೆಯವರಿಗೆ ಅಪಾರ ಶಬ್ದಗಳಿಂದ ಬೈದಿದ್ದು, ಬಳಿಕ ತನ್ನ ಮೊಬೈಲಿಗೆ ತಲಾ 10 ನಿಮಿಷಗಳ ಅಂತರದಲ್ಲಿ 7353583244 ಹಾಗೂ 9901622215 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಗಳು ಕೂಡಾ ಇದೇ ವಿಚಾರ ಪ್ರಸ್ತಾಪಿಸಿ ಮಾತನಾಡಿದಾಗ ಚಂದ್ರಹಾಸ ಕರೆ ಕಟ್ ಮಾಡಿರುವುದಾಗಿರುತ್ತದೆ. ತನಗೆ ಜೀವ ಬೆದರಿಕೆ ಹಾಕಿದ ಅನಾಮಧೇಯ ವ್ಯಕ್ತಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿ ಅವರು ಮಾ 12 ರಂದೇ ಪುತ್ತೂರು ಗ್ರಾಮಾಂತರ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದರು. ಜಿ.ಎಸ್.ಸಿ. ಸಂಖ್ಯೆ ಪಿಒ1063220600126 ರಂತೆ ದೂರು ದಾಖಲಿಸಿಕೊಂಡ ಪೊಲೀಸರು ಸದ್ರಿ ದೂರು ಪ್ರಕರಣವಾಗಿರುವ ಕಾರಣ, ನ್ಯಾಯಾಲಯದ ಅನುಮತಿ ಪಡೆದು ತಂದಲ್ಲಿ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಹಿಂಬರಹ ನೀಡಿದ್ದರು.
ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಹಾಸ ಅವರು ಪುತ್ತೂರು ಎ.ಎಸ್.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಿಸ್ ಕೇಸ್ 20-2022 ರಂತೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಮಾ 21 ರಂದು ಸದ್ರಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಪುತ್ತೂರು ಗ್ರಾಮಾಂತರ ಠಾಣಾಧಿಕಾರಿಗೆ ಆದೇಶಿಸಿದ ಹಿನ್ನಲೆಯಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಮಾರ್ಚ್ 23 ರಂದು ಠಾಣಾ ಅಪರಾಧ ಕ್ರಮಾಂಕ 40/2022 ಕಲಂ 507, 506, 504 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment