ಉಪ್ಪಿನಂಗಡಿ, ಮಾರ್ಚ್ 24, 2022 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಪೇಟೆಯ ಕೆಲವೊಂದು ಹಿಂದೂ ಬಾಂಧವರ ವ್ಯಾಪಾರ ಕೇಂದ್ರಗಳ ಹೆಸರನ್ನು ಉಲ್ಲೇಖಿಸಿ ಕೋಮು ದ್ವೇಷ ಪೂರಿತ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಸುವ್ಯ ಐಸ್ ಕ್ರೀಂ ಪಾರ್ಲರ್ ಸಂಸ್ಥೆಯ ಮಾಲಕ ಯತೀಶ್ ಶೆಟ್ಟಿ ಅವರು ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಉಪ್ಪಿನಂಗಡಿ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದಾರೆ.
ಮಾರ್ಚ್ 24 ರಂದು ಯಾರೋ ದುಷ್ಕರ್ಮಿಗಳು ಯತೀಶ್ ಶೆಟ್ಟಿ ಮಾಲಕತ್ವ ಸುವ್ಯ ಐಸ್ ಕ್ರೀಂ ಪಾರ್ಲರ್ ಸಹಿತ ಉಪ್ಪಿನಂಗಡಿ ಪರಿಸರದ ಹಿಂದೂ ಸಮುದಾಯದ ಕೆಲವೊಂದು ವ್ಯಾಪಾರ ಕೇಂದ್ರಗಳ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಶಾಂತಿ ಭಂಗ ಮತ್ತು ಮತೀಯ ದ್ವೇಷ ಮೂಡಿಸುವ ರೀತಿಯಲ್ಲಿ “ನಮ್ಮ ಅಂಗಡಿಗಳಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ, ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ” ಹಿಂದೂ ವರ್ತಕರ ಸಂಘ ಉಪ್ಪಿನಂಗಡಿ, ಎಂಬ ಒಕ್ಕಣೆಯಿಂದ ಕೂಡಿದ ಸುಳ್ಳು ಸಂದೇಶ ಸೃಷ್ಟಿಸಿ ಸಾಮಾಜಿಕ ಜಾಲತಾಣವಾದ ವಾಟ್ಸಪ್‍ನಲ್ಲಿ ಹರಿಯಬಿಟ್ಟಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಯತೀಶ್ ಶೆಟ್ಟಿ ಅವರ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2022 ಕಲಂ 505(2) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment