ಮಂಗಳೂರು, ಮಾರ್ಚ್ 08, 2022 (ಕರಾವಳಿ ಟೈಮ್ಸ್) : ತುಳುನಾಡಿನ ಪ್ರಾಚೀನ-ಪರಂಪರೆಯನ್ನು ಪ್ರಸಾರ-ಪ್ರಚಾರ ನೀಡಿರುವ ಪಾಡ್ದನ ಸಾಹಿತ್ಯ ಮುಂದಿನ ತಲೆಮಾರಿಗೂ ತಲುಪಬೇಕು, ಇದನ್ನು ಸಂರಕ್ಷಿಸುವ ಕಾರ್ಯ ಪ್ರಶಂಸನೀಯ, ತುಳು ಅಕಾಡೆಮಿಯ ಜವಾಬ್ದಾರಿಯನ್ನು ಇತರ ಅಕಾಡೆಮಿಯೂ ನಡೆಸಿದಲ್ಲಿ ಈ ನಾಡಿನ ಭವ್ಯ ಪರಂಪರೆಯನ್ನು ಭವಿಷ್ಯದಲ್ಲಿಯೂ ಪ್ರಚಲಿತದಲ್ಲಿರಲು ಸಾಧ್ಯವಾಗುತ್ತದೆ ಎಂದು ಮಂಗಳೂರಿನ ಸಂಸ್ಕಾರ ಭಾರತಿಯ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಹೇಳಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಂಸ್ಕಾರ ಭಾರತಿ ಮಂಗಳೂರು, ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪಾಡ್ದನ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಮ್ಮಟದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸಾರ್, ತುಳು ಅಕಾಡೆಮಿಯು ಬೆಳ್ಳಿ ವರ್ಷದ ಸಂಭ್ರಮದಲ್ಲಿದ್ದು, ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ, ಅಕಾಡೆಮಿಯ ಮೂಲಕ ಪಾಡ್ದನಕ್ಕೆ ವಿಶೇಷ ಆದ್ಯತೆ ನೀಡಿ ಅದರ ದಾಖಲೀಕರಣಗೊಳಿಸುತ್ತಿರುವುದರಿಂದ ಇದರ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿಯನ್ನು ಹೆಚ್ಚಿಸಿಕೊಂಡಿದೆ ಎಂದರು.
ಈ ಸಂದರ್ಭ ಪಾಡ್ದನ ಕಮ್ಮಟದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಕಾರ ಭಾರತಿಯ ಪ್ರಾಂತ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಪುರುಷೋತ್ತಮ ಗೋಳಿಪಲ್ಕೆ ಸ್ವಾಗತಿಸಿ, ಕಾರ್ತಿಕ್ ಪ್ರಾರ್ಥಿಸಿದರು. ಗೋಪಾಲ ಗೋಳಿಪಲ್ಕೆ ವಂದಿಸಿದರು.
0 comments:
Post a Comment